ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್  
ಮಂಡ್ಯ

ಅಭಿವೃದ್ಧಿ ನಿಗಮದ ಸಾಲ ಮನ್ನಾ ಮಾಡಲಿ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆಗ್ರಹ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ನೂರಾರು ಜನರು ಸಾಲ ಪಡೆದಿದ್ದಾರೆ
  • ರಾಜ್ಯಸರ್ಕಾರಕ್ಕೆ ಬಿಜೆಪಿ ಒತ್ತಾಯ
ಮಂಡ್ಯ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಪಡೆದ ಸಾಲವನ್ನು ಮನ್ನಾ ಮಾಡಿದಂತೆ ಡಾ.ಅಂಬೇಡ್ಕರ್, ವಾಲ್ಮೀಕಿ, ಒಕ್ಕಲಿಗ ಸೇರಿದಂತೆ ಎಲ್ಲ ಅಭಿವೃದ್ಧಿ ನಿಗಮಗಳಲ್ಲಿ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿರುವ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ನೂರಾರು ಜನರು ಸಾಲ ಪಡೆದಿದ್ದಾರೆ. ಜತೆಗೆ ರೈತರೂ ಸಾಲ ಪಡೆದಿದ್ದಾರೆ. ರೈತರು ಮತ್ತು ಸಾರ್ವಜನಿಕರು ಸಂಕಷ್ಟ ಪರಿಸ್ಥಿತಿಯಲ್ಲಿರುವುದರಿಂದ ಎಲ್ಲ ಫಲಾನುಭವಿಗಳ ಸಾಲವನ್ನೂ ಸಹ ಮನ್ನಾ ಮಾಡಬೇಕು. ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಅವರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಇತರರೂ ಸಹ ಮನುಷ್ಯರಂತೆ, ಅಥವಾ ಬಡವರಂತೆ ಕಾಣುವುದಿಲ್ಲವೇ, ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ನೀಡುವಂತಹ ನೀತಿಯನ್ನು ಬಿಟ್ಟು ಸಾಲ ಮನ್ನಾ ಮಾಡಿದರೆ ಎಲ್ಲರ ಸಾಲವನ್ನೂ ಮನ್ನಾ ಮಾಡಬೇಕು ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಜಾತ್ಯತೀತ ನಿಲುವನ್ನು ಹೊಂದಿದೆ. ಜತೆಗೆ ಅಹಿಂದ ನಾಯಕರೆಂದೆನಿಸಿಕೊಳ್ಳುವ ಸಿದ್ದರಾಮಯ್ಯ ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವವನ್ನು ಹೊಂದಿದ್ದಾರೆ. ಸಮ ಸಮಾಜ ನಿರ್ಮಾಣ ಮಾಡುತ್ತೇವೆ. ಸಾಮರಸ್ಯದ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತೇವೆ ಎಂದು ಕೇವಲ ಭಾಷಣಗಳಲ್ಲಿ ಹೇಳುವುದಷ್ಟಕ್ಕೆ ಸೀಮಿತಗೊಳಿಸದೆ, ಇದನ್ನು ಸಾರ್ವತ್ರಿಕವಾಗಿ ಜಾರಿಗೊಳಿಸಲು ಇಚ್ಚಾಶಕ್ತಿಯನ್ನು ಪ್ರದರ್ಶಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.