ಎಂ.ಎಂ ಫೌಂಡೇಷನ್ ಸಂಸ್ಥಾಪಕ ಮಹಾಲಿಂಗೇಗೌಡ  
ಮಂಡ್ಯ

ರೈತರ ಆತ್ಮಹತ್ಯೆ ತಡೆಯಲು ಕ್ರಮ ವಹಿಸಲಿ: ಎಂ.ಎಂ.ಫೌಂಡೇಷನ್ ಸಂಸ್ಥಾಪಕ ಮಹಾಲಿಂಗೇಗೌಡ ಒತ್ತಾಯ

ಮಂಡ್ಯ: ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಯಲು ರಾಜ್ಯಸರ್ಕಾರ ತಕ್ಷಣ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಎಂ.ಎಂ ಫೌಂಡೇಷನ್ ಸಂಸ್ಥಾಪಕ ಮಹಾಲಿಂಗೇಗೌಡ ಮುದ್ದನಘಟ್ಟ ಒತ್ತಾಯಿಸಿದ್ದಾರೆ.

ರೈತರು ಸಂಕಷ್ಟದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯಂತಹ ದುರ್ಘಟನೆಗಳಿಗೆ ಬಲಿಯಾಗುತ್ತಿರುವುದು ಅತ್ಯಂತ ನೋವಿನ ಮತ್ತು ಆತಂಕಕಾರಿ ಬೆಳವಣಿಗೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಂಡ್ಯ ಜಿಲ್ಲೆಯಲ್ಲಿಯೇ ಇಂದು ಸಾವಿರಾರು ಎಕರೆ ಕೃಷಿಭೂಮಿ ಬತ್ತಿ ನಿಂತಿದೆ. ಸಮರ್ಪಕ ನೀರಿನ ಕೊರತೆ, ಮಳೆಯ ಅಭಾವ, ಬೆಳೆ ನಷ್ಟ, ಬ್ಯಾಂಕ್ ಹಾಗೂ ಖಾಸಗಿ ಸಾಲದ ಒತ್ತಡ, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದಿರುವುದು ಮತ್ತು ರೈತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆಯದಿರುವುದು ಅನ್ನದಾತರನ್ನು ತೀವ್ರ ಮಾನಸಿಕ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರ ಆತ್ಮಹತ್ಯೆಯನ್ನು ಕೇವಲ ಅಂಕಿ-ಅಂಶಗಳಾಗಿ ಪರಿಗಣಿಸದೆ ಪ್ರತಿ ಜೀವವೂ ಒಂದು ಕುಟುಂಬದ ಆಶಾಕಿರಣ ಎಂಬ ಅರಿವಿನಿಂದ ಸರ್ಕಾರ ಕಾರ್ಯನಿರ್ವಹಿಸಬೇಕು. ರೈತರು ಬದುಕಿದರೆ ಮಾತ್ರ ರಾಜ್ಯದ ಆರ್ಥಿಕತೆ ಮತ್ತು ಆಹಾರ ಭದ್ರತೆ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಕ್ಷಣ ಸಮರ್ಪಕ ಪರಿಹಾರ ಮತ್ತು ಶಾಶ್ವತ ಪುನರ್ವಸತಿ ಕಲ್ಪಿಸಬೇಕು. ರೈತರ ಬ್ಯಾಂಕ್ ಹಾಗೂ ಸಹಕಾರ ಸಾಲಗಳ ಮರುಪರಿಶೀಲನೆ ಮಾಡಿ ಅಗತ್ಯವಾದ ಸಾಲ ಮನ್ನಾ ಅಥವಾ ಮರುಹೊಂದಿಕೆ ಕ್ರಮ ಕೈಗೊಳ್ಳಬೇಕು. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ತುರ್ತು ನೀರಾವರಿ ಯೋಜನೆ ಜಾರಿಗೊಳಿಸಿ, ಕೃಷಿಗೆ ಅಗತ್ಯವಾದ ನೀರಿನ ಲಭ್ಯತೆ ಖಚಿತಪಡಿಸಬೇಕು. ಬೆಳೆ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ರೈತರಿಗಾಗಿ ಸಹಾಯವಾಣಿ ವ್ಯವಸ್ಥೆ ರೂಪಿಸಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಸಮ್ಮತ ಬೆಂಬಲ ಬೆಲೆ ಹಾಗೂ ಖರೀದಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.