ಕಿಕ್ಕೇರಿ ಹೋಬಳಿಯ ಮಾದಾಪುರ ಗೇಟ್ ಬಳಿ ಬಸ್ ನಿಲುಗಡೆಗಾಗಿ ಗಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ರಾಮಕೃಷ್ಣೇಗೌಡ, ನಾಗೇಗೌಡ, ರಾಜೇಗೌಡ, ವೆಂಕಟೇಶ್, ಸಣ್ಣೇಗೌಡ, ಪ್ರದೀಪ್ ಮತ್ತಿತರರಿದ್ದರು.
ಕಿಕ್ಕೇರಿ: ಹೋಬಳಿಯ ಮಾದಾಪುರ ಗೇಟ್ ಬಳಿ ಬಸ್ ನಿಲುಗಡೆಯಾಗದೆ ಹತ್ತಾರು ಹಳ್ಳಿಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಹೋಬಳಿಯ ಮಾದಾಪುರ ಗೇಟ್ ಬಳಿ ಸುತ್ತಮುತ್ತಲ ಗ್ರಾಮಸ್ಥರು ಬಸ್ ನಿಲುಗಡೆಗಾಗಿ ಆಗ್ರಹಿಸಿ ಕೆಲಹೊತ್ತು ಬಸ್ ಸಂಚಾರ ತಡೆದು ಬೇಡಿಕೆ ಪೂರೈಕೆಗೆ ಒತ್ತಾಯಿಸಿದರು. ಬಸ್ ನಿಲುಗಡೆಗೆ ಆದೇಶವಿದ್ದರೂ ಪಾಲಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ವಯೋವೃದ್ಧರು, ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾದಾಪುರ ಗೇಟ್ ಊಗಿನಹಳ್ಳಿ, ಊಗಿನಹಳ್ಳಿ ಕೊಪ್ಪಲು, ಉದ್ದಿನಮಲ್ಲನ ಹೊಸೂರು, ಗಾಣದಹಳ್ಳಿ, ಮಂಡಲೀಕನಹಳ್ಳಿ, ಮಾದಾಪುರ, ಐಕನಹಳ್ಳಿ, ತುಳಸಿ, ಗೂಡೇಹೊಸಹಳ್ಳಿ, ಕಡಹೆಮ್ಮಿಗೆ ಮತ್ತಿತರ ಹಳ್ಳಿಗಳ ಸಂಪರ್ಕ ಕೇಂದ್ರವಾಗಿದೆ. ಈ ಗ್ರಾಮಗಳಿಂದ ನಿತ್ಯ ಕಾಲ್ನಡಿಗೆಯಲ್ಲಿ ಹೋಬಳಿ ಕೇಂದ್ರವಾದ ಕಿಕ್ಕೇರಿಗೆ ತೆರಳಿ ದೂರದ ಊರುಗಳಿಗೆ ತೆರಳಬೇಕಿದೆ. ಮಳೆ, ಗಾಳಿ, ಬಿಸಿಲಿನಲ್ಲಿ ಓಡಾಡಲು ದೊಡ್ಡ ಸಮಸ್ಯೆಯಾಗಿದೆ. ಸಾಕಷ್ಟು ಬಾರಿ ರಸ್ತೆ ತಡೆಯೊಂದಿಗೆ ಪ್ರತಿಭಟನೆ ನಡೆಸಲಾಗಿದೆ. ಕಂಡಕ್ಟರ್ ಮಾದಾಪುರ ಗೇಟ್‌ಗೆ ಟಿಕೆಟ್ ಬರುತ್ತಿಲ್ಲ ಎನ್ನುವ ಸಬೂಬು ನೀಡುತ್ತಾರೆ. ಆದರೆ ಚಿಕ್ಕಮಗಳೂರು, ಅರಸೀಕೆರೆ ಡಿಪೋದವರು ಟಿಕೇಟ್ ಕೊಡುತ್ತಾರೆ. ಇದು ಹೇಗೆ ಸಾಧ್ಯ?. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ವಿಷಯ ತಿಳಿದು ಕೆ.ಆರ್.ಪೇಟೆ ಸಂಚಾರ ನಿಯಂತ್ರಣ ಅಧಿಕಾರಿ ಕೃಷ್ಣ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ಮನವೊಲಿಸಿದರು. ಎಲ್ಲ ವಾಹನಗಳು ನಿಲುಗಡೆ ಮಾಡುವಂತೆ, ಟಿಕೇಟ್ ನೀಡುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಮುಖಂಡರಾದ ಮಾದಾಪುರ ಎಂ.ಕೆ.ರಾಮಕೃಷ್ಣೇಗೌಡ, ತುಳಸಿ ನಾಗೇಗೌಡ, ರಾಜೇಗೌಡ, ಮಂಡಲೀಕನಹಳ್ಳಿ ವೆಂಕಟೇಶ್, ಸಣ್ಣೇಗೌಡ, ಧನಂಜಯ, ಪ್ರದೀಪ್, ಎಲ್‌ಐಸಿ ಪುಟ್ಟರಾಜು, ಧರಣೇಶ್, ಕಿರಣ್, ವರುಣ್, ವಿದ್ಯಾರ್ಥಿಗಳು ಹಾಜರಿದ್ದರು.