ಕಾಯಂ ತಹಸೀಲ್ದಾರ್ ನಿಯೋಜನೆ ಹಾಗೂ ಶ್ರೀ ಹೊಳೆ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಕನ್ನಡ ಸೇನೆ ವತಿಯಿಂದ ನಗರ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿ ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮಂಜುನಾಥ್, ರಾಘವೇಂದ್ರ, ಪ್ರಜ್ವಲ್, ಮಧು, ಸೌಭಾಗ್ಯಾ ಇತರರು ಇದ್ದರು. 
ಮಂಡ್ಯ

ಕಾಯಂ ತಹಸೀಲ್ದಾರ್ ನಿಯೋಜನೆಗೆ ಒತ್ತಾಯ

ಮದ್ದೂರು: ಕಾಯಂ ತಹಸೀಲ್ದಾರ್ ನಿಯೋಜನೆ ಹಾಗೂ ನಗರದ ಪುರಾಣ ಪ್ರಸಿದ್ಧ ಕ್ಷೇತ್ರ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಕನ್ನಡ ಸೇನೆ ವತಿಯಿಂದ ನಗರ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಹಿಂದೆ ತಹಸೀಲ್ದಾರ್ ಆಗಿದ್ದ ಪರಶುರಾಮ್ ಸತ್ತಿಗೇರಿ ಅವರು ಬೆಂಗಳೂರಿಗೆ ವರ್ಗಾವಣೆಗೊಂಡು 25 ದಿನಗಳಾದರೂ ಹೊಸ ತಹಸೀಲ್ದಾರ್ ನಿಯೋಜಿಸದಿರುವ ಕಾರಣ ಕಚೇರಿಯಲ್ಲಿ ಬಹಳಷ್ಟು ಕೆಲಸಗಳು ಸ್ಥಗಿತಗೊಂಡಿವೆ. ಇದರಿಂದ ಸಾರ್ವಜನಿಕರಿಗೆ, ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕಿನ ಹಲವು ಗ್ರಾಮಗಳಿಂದ ಕಚೇರಿಗೆ ಬರುವ ರೈತರು ಹಾಗೂ ಜನಸಾಮಾನ್ಯರು ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಚೇರಿಯಲ್ಲಿನ ಎಲ್ಲ ವಿಭಾಗಗಳ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿವೆ. ಜಿಲ್ಲಾಧಿಕಾರಿಗಳು ಕೂಡಲೇ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಾರ್ವಜನಿಕ ಕೆಲಸ ಕಾರ್ಯಗಳು ಹಾಗೂ ಆಡಳಿತಾತ್ಮಕ ವ್ಯವಸ್ಥೆಗೆ ತೊಂದರೆಯಾಗದಂತೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ನಗರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಆದರೆ ದೇವಾಲಯಕ್ಕೆ ತೆರಳುವ ರಸ್ತೆ ಸರಿಯಿಲ್ಲದ ಕಾರಣ ವಾಹನಗಳು ಓಡಾಡುವುದೇ ಕಷ್ಟವಾಗಿದೆ. ತಕ್ಷಣ ತಾಲೂಕು ಜನರ ರಕ್ಷಣೆಗಾಗಿ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುವ ತಾಲೂಕು ಮದ್ದೂರಾಗಿದ್ದು, ನಗರದಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಬಹಳಷ್ಟು ಭೂಮಿ ಇತ್ತು. ಕಾಲಕ್ರಮೇಣ ಬೇರೆ ಇಲಾಖೆಗಳಿಗೆ ಬಹಳಷ್ಟು ಜಾಗ ನಿಯೋಜನೆ ಮಾಡಲಾಗಿದೆ. ರೇಷ್ಮೆ ಬೆಳೆಗಾರರ ಅನುಕೂಲಕ್ಕಾಗಿ ಇರುವ ಭೂಮಿಯನ್ನು ಬೇರೆ ಇಲಾಖೆಗೆ ನೀಡುತ್ತಿರುವುದು ಖಂಡನೀಯ ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮದ್ದೂರು ತಾಲೂಕು ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ಪ್ರಜ್ವಲ್, ಜಿಲ್ಲಾ ಉಪಾಧ್ಯಕ್ಷ ಎಡಗನಹಳ್ಳಿ ಮಧು, ಜಿಲ್ಲಾ ಮಹಿಳಾ ಅಧ್ಯಕ್ಷೆ ಸೌಭಾಗ್ಯಾ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ್ ಬೆಟ್ಟಳ್ಳಿ, ಮುಖಂಡರಾದ ಆತ್ಮನಂದ, ರಾಜೇಶ್, ಜಿ.ಮಹಾಂತಪ್ಪ, ರಘು, ಅಭಿಷೇಕ್, ಶಿವಲಿಂಗಪ್ಪ, ಶಾಲಿನಿ, ಮಂಗಳಮ್ಮ, ಶಿವಾಲಿ ಕನ್ನಡ ಸೇನೆ ಪದಾಧಿಕಾರಿಗಳು ಇದ್ದರು.