ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಕಚೇರಿ ಎದುರು ಹೊಂಗಳ್ಳಿ ಗ್ರಾಮಸ್ಥರು ಹಾಗೂ ದಸಂಸ ಮುಖಂಡರು ಅಂಬೇಡ್ಕರ್ ಸಮುದಾನ ಭವನ ಕಾಮಗಾರಿ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಬಂಗಾರಪ್ಪ, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮರಳಗಾಲ ಸುರೇಶ್, ಧನಂಜಯ್ಯ, ಕೆ.ಶೆಟ್ಟಹಳ್ಳಿ ಸುರೇಶ್, ಅರಕೆರೆ ಸುರೇಶ್, ಮುತ್ತು, ಚೇತನ್ ಇತರರು ಇದ್ದರು. 
ಮಂಡ್ಯ

ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಗೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಹೊಂಗಳ್ಳಿ ಗ್ರಾಮಸ್ಥರು, ದಸಂಸ ಮುಖಂಡರಿಂದ ಪ್ರತಿಭಟನೆ
ಶ್ರೀರಂಗಪಟ್ಟಣ: ತಾಲೂಕಿನ ಹೊಂಗಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ವಿಚಾರದಲ್ಲಿ ಅಸಂವಿಧಾನಿಕವಾಗಿ ಪತ್ರ ನೀಡಿ ಕಾಮಗಾರಿ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಮಂಗಳವಾರ ಹೊಂಗಳ್ಳಿ ಗ್ರಾಮಸ್ಥರು ಹಾಗೂ ದಸಂಸ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹುಲಿಕೆರೆ ಗ್ರಾಮ ಪಂಚಾಯಿತಿ ಸದಸ್ಯ ಬಂಗಾರಪ್ಪ ಮಾತನಾಡಿ, ಹೊಂಗಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ 2025-26ನೇ ಸಾಲಿನ ಆಡಳಿತ ಮಂಡಳಿ ಕ್ರಿಯಾ ಯೋಜನೆ ನೀಡಿದ್ದು, ಇದಕ್ಕೆ ತಾಪಂ ಇಒ ಅವರು ಅನುಮೋದನೆ ನೀಡಿ ಅನುದಾನ ಬಿಡುಗಡೆಗೊಳಿಸಿದರು. ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ತರಲಾಗಿದ್ದು, ಈ ನಡುವೆ ಏಕಾಏಕಿ ಸಕಾರಣವಿಲ್ಲದೆ ಕಾಮಗಾರಿ ತಡೆ ಹಿಡಿಯುವಂತೆ ಅಸಂವಿಧಾನಿಕವಾಗಿ ಇಒ ವೇಣು ಅವರು ಪತ್ರ ನೀಡಿರುವುದು ಏಕೆ ಎಂದು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಇಒ ವೇಣು ಮಾತನಾಡಿ, ಕೆಲವೊಂದು ಕಾರಣಾಂತರಗಳಿಂದ ಹಾಗೂ ಅಸ್ಪಷ್ಟ ಮಾಹಿತಿಗಳ ವ್ಯತ್ಯಾಸವಾಗಿದೆ. ಹೊರತು ಕಾಮಗಾರಿಯನ್ನು ತಡೆ ಹಿಡಿದಿಲ್ಲ. ಮುಂದಿನ ವಾರವೇ ಕಾಮಗಾರಿಗೆ ಚಾಲನೆ ನೀಡಲು ಪತ್ರ ನೀಡಲಾಗುತ್ತಿದ್ದು, ಯಾರಿಗೂ ಗೊಂದಲ ಬೇಡ ಎಂಬ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಹೋರಾಟಗಾರರು ಪ್ರತಿಭಟನೆ ಹಿಂಪಡೆದರು.
ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮರಳಗಾಲ ಸುರೇಶ್, ಧನಂಜಯ್ಯ, ಕೆ.ಶೆಟ್ಟಹಳ್ಳಿ ಸುರೇಶ್, ಅರಕೆರೆ ಸುರೇಶ್, ಮುತ್ತು, ಚೇತನ್ ಇತರರು ಇದ್ದರು.