ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಹರ್ಷ, ಸುನಿಲ್, ಅಪೂರ್ವ ಚಂದು, ರಾಮಚಂದ್ರ, ಶಿವಕುಮಾರ್ ಬಿರಾದಾರಾ, ರಾಮಲಿಂಗಯ್ಯ ಇದ್ದರು. 
ಮಂಡ್ಯ

ಸಾಹಿತ್ಯ ಸಮ್ಮೇಳನ ಅದ್ಧೂರಿ ಆಚರಣೆಗೆ ನಿರ್ಧಾರ

ಪ್ರಮುಖ ಮುಖ್ಯಾಂಶಗಳು

  • literary conference
ಮದ್ದೂರು: ನಗರದಲ್ಲಿ ಸೆ. 17ರ ಗುರುವಾರ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಯೋಜನೆ ಮಾಡಲಾಗುವುದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆ.17ರ ಗುರುವಾರ ನಗರದ ತಾಲೂಕು ಕ್ರೀಡಾಂಗಣದಲ್ಲಿ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸಾಹಿತ್ಯಾಸಕ್ತರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ ನಾಗರಿಕರು, ಸಾರ್ವಜನಿಕರು ಸಮ್ಮೇಳನದ ಯಶಸ್ವಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಸಾಹಿತ್ಯ ಸಮ್ಮೇಳನದ ಅಂಗವಾಗಿ ಎಂದಿನಂತೆ ಸಮ್ಮೇಳನದ ಅಧ್ಯಕ್ಷರನ್ನು ಭವ್ಯ ಮೆರವಣಿಗೆಯೊಂದಿಗೆ ಪ್ರವಾಸಿ ಮಂದಿರದಿಂದ ವೇದಿಕೆ ಕಾರ್ಯಕ್ರಮಕ್ಕೆ ಕರೆತರಲಾಗುವುದೆಂದು ವಿವರಿಸಿದರು.
ಬಳಿಕ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡುವ ಜತೆಗೆ ಸಾಹಿತ್ಯ ಪ್ರೇಮಿಗಳ ವಿಚಾರಗೋಷ್ಠಿ, ಕವಿಗೋಷ್ಠಿ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬ ಕನ್ನಡ ಪ್ರೇಮಿಯು ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಸ್ವಾಗತ ಸಮಿತಿ, ಆಹಾರ ಸಮಿತಿ, ಆಮಂತಣ ಪತ್ರಿಕೆ ಸಮಿತಿ. ಪ್ರಚಾರ, ಸ್ಮರಣ ಸಂಚಿಕೆ, ಶಿಷ್ಟಚಾರ, ವೇದಿಕೆ ಸಮಿತಿಗಳನ್ನು ರಚಿಸಿ ಒಬ್ಬೊಬ್ಬರಿಗೆ ಒಂದೊಂದು ಜವಬ್ದಾರಿಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಗಣೇಶ ಉತ್ಸವ:
ಸೆ. 14 ರಿಂದ 19 ರವರೆಗೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಗಣೇಶೋತ್ಸವವನ್ನು ಒಟ್ಟು ಆರು ದಿನಗಳ ಕಾಲ ಆಚರಿಸಲಾಗುವುದು. ನಿತ್ಯ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸೆ. 19ರಂದು ಖ್ಯಾತ ಗಾಯಕರು ಹಾಗೂ ಚಿತ್ರನಟರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಕದಲೂರು ಉದಯ್ ತಿಳಿಸಿದದರು. ನಗರ ಸೇರಿದಂತೆ ತಾಲೂಕು ಹಲವು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳನ್ನು ಸೆ.20 ರಂದು ವಿಸರ್ಜನೆ ಮಾಡಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಪಣ್ಣೆದೊಡ್ಡಿ ಹರ್ಷ, ತಾಲೂಕು ಅಧ್ಯಕ್ಷ ಕೊಣಸಾಲೆ ಸುನಿಲ್, ಮಾಜಿ ಅಧ್ಯಕ್ಷರಾದ ಅಪೂರ್ವ ಚಂದು, ರಾಮಚಂದ್ರು, ಜಿಲ್ಲಾ ಉಪಾಧ್ಯಕ್ಷರಾದ ಬೋರೇಗೌಡ, ಗೌರವ ಕಾರ್ಯದರ್ಶಿ ಆನಂದ್, ತಹಸೀಲ್ದಾರ್ ಶಿವಕುಮಾರ ಬಿರೆದಾರ್, ತಾಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅನಂತೇಗೌಡ, ಮುಖಂಡರಾದ ರಮೇಶ್, ಕೃಷ್ಣೇಗೌಡ, ಚಂದ್ರಶೇಖರ್, ಕೃಷ್ಣ, ಮಹದೇವು, ನ.ಲಿ.ಕೃಷ್ಣ, ಕುಮಾರ್ ಕೊಪ್ಪ, ಸೊ.ಶಿ.ಪ್ರಕಾಶ್, ಹೊಂಬಯ್ಯ, ಶಿವರಾಜ್, ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.