ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಉದ್ಘಾಟಿಸಿದರು. ನಂದೀಶ್, ಎ.ವಿಜೇಂದ್ರಮೂರ್ತಿ, ರವಿಚಂದನ್, ಪುಟ್ಟಸ್ವಾಮೀಗೌಡ, ಸಿ.ವನಜಾಕ್ಷಿ ಇತರರು ಇದ್ದರು.
ಡಿಸಿಸಿ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಗ್ರಾಹಕರೊಂದಿಗೆ ಸೌಮ್ಯದಿಂದ ವರ್ತಿಸಬೇಕು. ಜತೆಗೆ ಬ್ಯಾಂಕ್‌ನ ಬ್ಯಾಲೆನ್ಸ್ ಶೀಟ್, ಎನ್‌ಪಿಎ ಹಾಗೂ ಸೈಬರ್ ಸೆಕ್ಯೂರಿಟಿ ಬಗ್ಗೆ ಎಚ್ಚರವಹಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟ, ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಯಾರೇ ಆದರೂ ಪ್ರತಿದಿನ ಕಲಿಯಲು, ತಿಳಿದುಕೊಳ್ಳಲು ಬಹಳ ವಿಷಯಗಳು ಇರುತ್ತವೆ. ನಾವು ಎಷ್ಟೇ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೂ ಒಮ್ಮೊಮ್ಮೆ ಎಡವುತ್ತೇವೆ. ಇಂತಹ ಶಿಬಿರಗಳ ಮೂಲಕ ಹೆಚ್ಚಿನ ವಿಚಾರ, ಮಾಹಿತಿ ತಿಳಿದುಕೊಂಡು ಬ್ಯಾಂಕ್ ವ್ಯವಹಾರವನ್ನು ಎಚ್ಚರಿಕೆಯಿಂದ ನಡೆಸಬೇಕು ಎಂದು ತಿಳಿಸಿದರು.
ಮನ್ ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕ್ ಹಾಗೂ ಮನ್‌ಮುಲ್ ಒಕ್ಕೂಟವು ಜಿಲ್ಲೆಯ ರೈತರ ಎರಡು ಕಣ್ಣುಗಳಾಗಿ ಕೆಲಸ ಮಾಡುತ್ತಿವೆ. ಸಹಕಾರಿ ಕ್ಷೇತ್ರದ ದುರೀಣರಾದ ಕೆ.ವಿ.ಶಂಕರೇಗೌಡರು, ಚೌಡಯ್ಯ ಅವರಂತಹ ವ್ಯಕ್ತಿಗಳು ದೂರದೃಷ್ಟಿಯಿಂದ ಬ್ಯಾಂಕ್ ಸ್ಥಾಪನೆ ಮಾಡಿದ್ದಾರೆ. ಗ್ರಾಹಕರು ಬ್ಯಾಂಕ್‌ಗೆ ಬಂದಾಗ ನೆಟ್‌ವರ್ಕ್ ಇಲ್ಲ, ಚನೆಲ್ ಇಲ್ಲ ಎಂಬುದಾಗಿ ಸಬೂಬು ಹೇಳಬೇಡಿ, ಹೈನುಗಾರಿಕೆ ಉತ್ಪಾದಕ ರೈತರಿಗೆ ಡಿಸಿಸಿ ಬ್ಯಾಂಕ್ ನಿಂದ ಹೆಚ್ಚಿನ ಸಾಲಸೌಲಭ್ಯ ನೀಡಿ ಉತ್ತೇಜನ ನೀಡಬೇಕು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ನಂದೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ವಿಜೇಂದ್ರಮೂರ್ತಿ ಮಾತನಾಡಿದರು. ಆರ್‌ಐಸಿಎಂ ನಿವೃತ್ತ ನಿರ್ದೇಶಕ ರವಿಚಂದನ್ ಉಪನ್ಯಾಸ ನೀಡಿದರು.
ಸಂದರ್ಭದಲ್ಲಿ ಭಗತ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ ಕುಲಸಚಿವ ಡಾ.ಎಸ್.ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪುಟ್ಟಸ್ವಾಮೀಗೌಡ, ಡಿಸಿಸಿ ಬ್ಯಾಂಕ್ ಸಿಇಒ ಸಿ.ವನಜಾಕ್ಷಿ, ಪ್ರಧಾನ ವ್ಯವಸ್ಥಾಪಕ ಆರ್.ಜೆ.ರೂಪಶ್ರೀ, ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಂ.ಪಿ.ಜ್ಯೋತಿ, ನಿರ್ದೇಶಕರಾದ ಎಸ್.ನಾಗೇಂದ್ರ, ಕೆ.ಎಲ್.ದೊಡ್ಡಲಿಂಗೇಗೌಡ, ರಘುನಂದನ್, ಎಚ್.ಸಿ.ಕೃಷ್ಣ, ಆರ್.ಎಸ್.ಮಹೇಶ್, ಎಚ್.ಬಿ.ಚಂದ್ರು ಇತರರು ಇದ್ದರು.