ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಇಂಧನ ವಿತರಕ ಕಂಪನಿ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ಕೊರತೆಯಿಲ್ಲ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಇಂಧನ ವಿತಕರೊಂದಿಗೆ ಸಭೆ
ಮಂಡ್ಯ: ಜಿಲ್ಲೆಯಲ್ಲಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾಕಷ್ಟು ದಾಸ್ತಾನು ಲಭ್ಯವಿದೆ. ಆದರೆ ಅನಧಿಕೃತವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಚ್‌ಪಿಸಿ, ಬಿಪಿಸಿ ಮತ್ತು ಐಒಸಿ ಇಂಧನ ವಿತರಕ ಕಂಪನಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವುದು ಕಾನೂನುಬಾಹಿರ ಮತ್ತು ಅಪಾಯಕಾರಿ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಅಸುರಕ್ಷಿತ ಸಂಗ್ರಹವು ಭೀಕರ ಅಗ್ನಿ ಅವಘಡಗಳಿಗೆ ಕಾರಣವಾಗಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 182 ಪೆಟ್ರೋಲ್ ಬಂಕ್‌ಗಳಿವೆ. ಪ್ರತಿನಿತ್ಯ 2.31 ಲಕ್ಷ ಲೀಟರ್ ಇಂಧನ ಬಳಸಲಾಗುತ್ತಿದೆ. ಅಂತೆಯೇ ಜಿಲ್ಲೆಯಲ್ಲಿ 11.81 ಲಕ್ಷ ಲೀಟರ್ ಪೆಟ್ರೋಲ್ ಹಾಗೂ 18 ಲಕ್ಷ ಲೀಟರ್ ಡೀಸೆಲ್ ಸಂಗ್ರಹವಿದೆ. ಸಾರ್ವಜನಿಕರು ಆತಂಕ ಪಟ್ಟು ಅನಗತ್ಯವಾಗಿ ಕ್ಯಾನ್, ಬಾಟಲಿನಲ್ಲಿ ತುಂಬಿಸಿ ಶೇಖರಣೆ ಮಾಡಬೇಡಿ. ಸಾರ್ವಜನಿಕರು ಪೆಟ್ರೋಲಿಯಂ ಉತ್ಪನ್ನಗಳನ್ನು ಅನವಶ್ಯಕವಾಗಿ ಸಂಗ್ರಹಿಸಿಡುವುದು ಕಾನೂನು ಬಾಹಿರ. ಜತೆಗೆ ಅದು ಅಸುರಕ್ಷಿತವಾಗಿದ್ದು, ಅಗ್ನಿ ಅವಘಡಗಳು ಉಂಟಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಮತ್ತು ಅನಗತ್ಯವಾಗಿ ಕ್ಯಾನ್, ಬಾಟಲಿಗಳಲ್ಲಿ ತುಂಬಿಸುವವರ ವಿರುದ್ಧ ಕಾನೂನು ಕ್ರಮ ವಹಿಸಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ವದಂತಿಗಳಿಂದಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರು ದೀರ್ಘ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಇಂಧನವನ್ನು ಸಂಗ್ರಹಣೆ ಮಾಡದಂತೆ ಹಾಗೂ ಕ್ಯಾನ್‌ಗಳಿಗೆ ಇಂಧನವನ್ನು ತುಂಬಿಸದಂತೆ ಕ್ರಮ ವಹಿಸಬೇಕು. ಪೆಟ್ರೋಲ್ ಬಂಕ್ ಮಾಲೀಕರು ಕಾನೂನು ನಿಯಮ ಹಾಗೂ ಸುತ್ತೋಲೆಗಳನ್ನು ಅನುಸರಿಸಬೇಕು. ಇಂಧನವನ್ನು ಅನಗತ್ಯವಾಗಿ ಸಾರ್ವಜನಿಕರಿಗೆ ತುಂಬಿಸುವ ಪ್ರಕ್ರಿಯೆಯನ್ನು ನಿರ್ಬಂಧಿಸಬೇಕು ಎಂದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಆಹಾರ ಮತ್ತು ನಾಗರಿಕೆ ಸರಬರಾಜು ಇಲಾಖೆ ಉಪ ನಿರ್ದೇಶಕರು ಪ್ರತೀಕ್‌ಹೆಗ್ಡೆ ಇದ್ದರು.