ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. 
ಮಂಡ್ಯ

ಎರಡು ಹೋಂ ಸ್ಟೇ ನೋಂದಣಿ ರದ್ದುಗೊಳಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ರಂಗನತಿಟ್ಟು ಪಕ್ಷಿಧಾಮ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಎರಡು ಹೋಂ ಸ್ಟೇ
  • ಕೂಡಲೇ ನೋಂದಣಿ ರದ್ದುಗೊಳಿಸಲು ಡಿಸಿ ಸೂಚನೆ
  • ಅನುಮತಿ ನೀಡಿದ ಅಧಿಕಾರಿ ಮತ್ತು ಮಾಲೀಕರ ವಿರುದ್ಧ ಕ್ರಮವಾಗಲಿ
ಮಂಡ್ಯ: ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ನಿರ್ಮಿಸಲಾಗಿರುವ ಎರಡು ಹೋಂ ಸ್ಟೇಗಳು ರಂಗನತಿಟ್ಟು ಪಕ್ಷಿಧಾಮ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಎರಡು ಹೋಂ ಸ್ಟೇ ನೋಂದಣಿಯಲ್ಲಿ ರದ್ದುಪಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ಕಾವೇರಿ ನದಿ ತೀರದಲ್ಲಿ ಒತ್ತುವರಿಯಾಗಿರುವ ಜಾಗ ತೆರವುಗೊಳಿಸುವ ಸಂಬಂಧ ಚರ್ಚಿಸಲು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡು ಹೋಂ ಸ್ಟೇ ನಿರ್ಮಾಣ ಮಾಡಲು ಅನುಮತಿ ನೀಡಿದ ಅಧಿಕಾರಿ ಹಾಗೂ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಶ್ರೀರಂಗಪಟ್ಟಣದ ಕೋಟೆ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ನಿರ್ವಹಣೆಗಾಗಿ ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಆಹ್ವಾನಿಸಲಾಗಿದ್ದ ಇ-ಟೆಂಡರ್‌ನಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಸೌಲಭ್ಯವನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ವತಿಯಿಂದ ನಿರ್ವಹಿಸಲು ಸರ್ಕಾರದಿಂದ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಗುರುತಿಸಿರುವ ಹೆಗ್ಗಳಿಕೆಗೆ ಮಂಡ್ಯ ಜಿಲ್ಲೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳನ್ನು ಉತ್ತೇಜಿಸಲು ಪ್ರವಾಸಿ ಗೈಡ್, ಮ್ಯಾಪ್ ಹಾಗೂ ವೈಬ್‌ಸೈಟ್ ಸಿದ್ಧಪಡಿಸಲಾಗಿದೆ. ಪ್ರವಾಸೋದ್ಯಮ ನೀತಿ 2024-29 ರಡಿ ಮಂಡ್ಯ ಜಿಲ್ಲೆಯಲ್ಲಿ 106 ಪ್ರವಾಸಿ ತಾಣಗಳನ್ನು ಸರ್ಕಾರದಿಂದ ಅಧಿಕೃತವಾಗಿ ಗುರುತಿಸಲಾಗಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ರೀತಿಯ ವೆಬ್‌ಸೈಟ್ ಇರಲಿಲ್ಲ. ಪ್ರವಾಸೋದ್ಯಮ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸಿತಾಣ ಕುರಿತು ವೆಬ್‌ಸೈಟ್ ಅನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರ ಉಪಯೋಗಕ್ಕಾಗಿ ಸಿದ್ದಪಡಿಸಲಾಗಿದೆ. ಶೀಘ್ರದಲ್ಲೇ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದರು.
ಮೇಲುಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಯಾತ್ರಿನಿವಾಸ ಕಟ್ಟಡವನ್ನು ನಿರ್ವಹಣೆಗಾಗಿ ವಹಿಸುವ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ಕರೆಯಲಾಗಿದ್ದ ಇ-ಟೆಂಡರ್‌ನಲ್ಲಿ ಬಿಡ್ಡುದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಸದರಿ ಕಟ್ಟಡವನ್ನು ಮೇಲುಕೋಟೆಯ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಮರ್ಪಕವಾಗಿ ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು. 
ಮದ್ದೂರು ತಾಲೂಕು ಕೊಕ್ಕರೆ ಬೆಳ್ಳೂರು ಪ್ರವಾಸಿ ತಾಣದಲ್ಲಿ  ನಿರ್ಮಿಸಿರುವ ಇಂಟರ್‌ಪ್ರಿಟೇಷನ್ ಸೆಂಟರ್ ಸೌಲಭ್ಯದ ನಿರ್ವಹಣೆಗಾಗಿ ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಇ-ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ ಯಾವುದೇ ಬಿಡ್ಡುದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಸದರಿ ಸೌಲಭ್ಯವನ್ನು ಡಬ್ಲುೃಡಬ್ಲುೃಎಫ್ ಇಂಡಿಯಾ ಸಂಸ್ಥೆಯಿಂದ ನಿರ್ವಹಿಸಲು ಸರ್ಕಾರದಿಂದ ಸೂಕ್ತ ಸ್ಪಷ್ಟೀಕರಣ ಪಡೆಯಬೇಕು. ಅಂತೆಯೇ ನಾಗಮಂಗಲ ತಾಲೂಕಿನ ಮುಳುಕಟ್ಟಮ್ಮ ದೇವಾಲಯದ ಬಳಿ  ನಿರ್ಮಿಸಿರುವ ಯಾತ್ರಿನಿವಾಸ ಕಟ್ಟಡವನ್ನು ನಿರ್ವಹಣೆಗಾಗಿ ವಹಿಸುವ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ಕರೆಯಲಾಗಿದ್ದ ಇ-ಟೆಂಡರ್‌ನಲ್ಲಿ ಇಬ್ಬರು ಬಿಡ್ಡುದಾರರು ಭಾಗವಹಿಸಿದ್ದರು. ಆದರೆ ಅವರು ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇರುವ ಹಿನ್ನೆಲೆಯಲ್ಲಿ ತಾಂತ್ರಿಕವಾಗಿ ಬಿಡ್ ಅನರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಟೆಂಡರ್ ರದ್ದುಪಡಿಸಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ವತಿಯಿಂದ ನಿರ್ವಹಿಸಲು ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಹೊಸದಾಗಿ ಮರು ಟೆಂಡರ್ ಆಹ್ವಾನಿಸಿ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಒಟ್ಟು 3,672.41 ಲಕ್ಷ ರೂ ವೆಚ್ಚದಲ್ಲಿ 41 ಮುಂದುವರೆದ ಪ್ರವಾಸಿ ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದರು. 
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಲಿಂಗಯ್ಯ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗೀತಾ ಇತರರಿದ್ದರು.