ಮದ್ದೂರು ತಾಲೂಕಿನಲ್ಲಿ ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ವಿವಿಧ ಸೇವೆಗಳ ಪ್ರಗತಿ ಹಾಗೂ ಬಾಕಿ ಪ್ರಕರಣಗಳನ್ನು ಜಿಲ್ಲಾಧಿಕಾರಿ ಡಾ.ಕುಮಾರ ಪರಿಶೀಲಿಸಿದರು.
ತಾಲೂಕಿನಲ್ಲಿ ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ವಿವಿಧ ಸೇವೆಗಳ ಪ್ರಗತಿ ಹಾಗೂ ಬಾಕಿ ಪ್ರಕರಣಗಳ ವಿಲೇವಾರಿಯನ್ನು ಬುಧವಾರ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಬಾಕಿ ಇರುವ ದರ್ಕಾಸ್ತು ಪೋಡಿ, ಇ-ಸ್ಕೆಚ್ ಹಾಗೂ ಇನ್ನಿತರ ಸರ್ವೆ ಪ್ರಕರಣಗಳ ಪ್ರಗತಿಯನ್ನು ಪರಿಶೀಲಿಸಿದರು. ಸರ್ವೆ ಇಲಾಖೆಯ ಹದ್ದುಬಸ್ತು, ಪೋಡಿ, ದರ್ಕಾಸ್ತು ಪೋಡಿ, ಇ-ಸ್ಕೆಚ್, ಭೂಮಾಪನ, ಜಮೀನು ಸರ್ವೆ, ಮೋಜಣಿ, ವಿಭಜನೆ, ಪುನರ್‌ಮಾಪನ ಸೇರಿದಂತೆ ವಿವಿಧ ಸರ್ವೆ ಸಂಬಂಧಿತ ಸೇವೆಗಳು ಹಾಗೂ ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳ ಬಾಕಿ ವಿಲೇವಾರಿಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ವಿಶೇಷವಾಗಿ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸಿ, ಸ್ಥಳ ಪರಿಶೀಲನೆ ಅಗತ್ಯವಿರುವ ಪ್ರಕರಣಗಳಲ್ಲಿ ತ್ವರಿತವಾಗಿ ಸ್ಥಳ ಪರಿಶೀಲನೆ ಕೈಗೊಂಡು, ನಿಯಮಾನುಸಾರ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಸಾರ್ವಜನಿಕರು ಸರ್ವೆ ಇಲಾಖೆಯ ಸೇವೆಗಳನ್ನು ಪಡೆಯಲು ಸಲ್ಲಿಸಿರುವ ಅರ್ಜಿಗಳು ಅನಗತ್ಯವಾಗಿ ಬಾಕಿ ಉಳಿಯದಂತೆ ಕ್ರಮವಹಿಸಿ, ನಿಗದಿತ ಅವಧಿಯಲ್ಲಿ ಸೇವೆಗಳನ್ನು ಒದಗಿಸುವ ಮೂಲಕ ಸಾರ್ವಜನಿಕರಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ತಾಲೂಕಿನಲ್ಲಿ ಸರ್ವೆ ಇಲಾಖೆಯ ವಿವಿಧ ಸೇವೆಗಳ ಬಾಕಿ ಪ್ರಕರಣಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಬಾಕಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಹಸೀಲ್ದಾರ್ ಶಿವಕುಮಾರ್ ಬಿರಾದಾರ, ಇತರ ಅಧಿಕಾರಿಗಳು ಹಾಜರಿದ್ದರು.