ಬೊಮ್ಮನಾಯಕನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ ಪ್ರಸ್ತುತ ಖಾಸಗಿ ಕೊಳವೆ ಬಾವಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಗ್ರಾಮಸ್ಥರಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ತಲುಪುತ್ತಿದೆಯೇ, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆಯೇ ಎಂಬುದರ ಕುರಿತು ಪರಿಶೀಲಿಸಿದರು. ತುರ್ತು ಪರಿಸ್ಥಿತಿಯಲ್ಲಿ ಗ್ರಾಮಕ್ಕೆ ನೀರು ಪೂರೈಸಲು ಖಾಸಗಿ ಕೊಳವೆಬಾವಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಾಲೀಕರಿಗೆ ನಿಯಮಾನುಸಾರ ಅನುದಾನ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಪೂರೈಕೆಯಲ್ಲಿ ವಿಳಂಬವಾಗದಂತೆ ಸ್ಥಳೀಯವಾಗಿ ಲಭ್ಯವಿರುವ ನೀರಿನ ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ನೀರಿನ ಮೂಲಗಳಲ್ಲಿ ಲಭ್ಯತೆ ಕಡಿಮೆಯಾದರೆ ತಕ್ಷಣ ಪರ್ಯಾಯ ಕೊಳವೆ ಬಾವಿ, ಟ್ಯಾಂಕರ್ ಸೇರಿದಂತೆ ಅಗತ್ಯವಿರುವ ವ್ಯವಸ್ಥೆಗಳನ್ನು ಕಲ್ಪಿಸಿ ಜನರಿಗೆ ನಿರಂತರವಾಗಿ ನೀರು ಪೂರೈಸಬೇಕು. ನೀರಿನ ಸಮಸ್ಯೆ ಉಂಟಾದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ಸಮಸ್ಯೆ ಉಂಟಾಗಬಹುದಾದ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಲಭ್ಯತೆ, ಕೊಳವೆ ಬಾವಿಗಳ ನೀರಿನ ಮಟ್ಟ ಹಾಗೂ ನೀರು ಸರಬರಾಜಿನ ಸ್ಥಿತಿಗತಿಗಳ ಬಗ್ಗೆ ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ನೀರಿನ ಸಮಸ್ಯೆ ಕುರಿತು ಗ್ರಾಮಸ್ಥರಿಂದ ದೂರುಗಳು ಬಂದಲ್ಲಿ ಅವುಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಶೀಲಿಸಿ ತ್ವರಿತವಾಗಿ ಪರಿಹರಿಸಬೇಕು. ಅಗತ್ಯವಿರುವ ಕಡೆ ಪರ್ಯಾಯ ನೀರು ಪೂರೈಕೆಗೆ ಕ್ರಮ ಕೈಗೊಂಡು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಪಂ ಸಿಇಒ ನಂದಿನಿ ಸೂಚಿಸಿದರು.
ತುರ್ತು ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಾಧ್ಯತೆಗಳನ್ನೂ ಪರಿಶೀಲಿಸಬೇಕು. ಲಭ್ಯವಿರುವ ಸರ್ಕಾರಿ ನೀರಿನ ಮೂಲಗಳ ಸ್ಥಿತಿ, ಹೊಸ ಕೊಳವೆಬಾವಿ ಅಗತ್ಯವಿದೆಯೇ ಹಾಗೂ ನೀರು ಸರಬರಾಜು ವ್ಯವಸ್ಥೆ ಬಲಪಡಿಸಲು ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಅಧಿಕಾರಿಗಳು ವರದಿ ಸಿದ್ಧಪಡಿಸುವಂತೆ ಸೂಚಿಸಲಾಯಿತು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎನ್.ಜಿ.ಪ್ರವೀಣಕುಮಾರ್, ತಾಪಂ ಇಒ ಸುಷ್ಮಾ, ಶೀಳನೆರೆ ಪಿಡಿಒ ಇತರರು ಇದ್ದರು.