ಮಂಡ್ಯ ನಗರದ ಡಾ.ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನದಲ್ಲಿ ದಾಸೋಹ ಹುಣ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  
ಮಂಡ್ಯ

ಸಿದ್ದಗಂಗಾಮಠದ ಸೇವೆ ಎಲ್ಲರಿಗೂ ಮಾದರಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿ ಉದ್ಯಾನದಲ್ಲಿ ದಾಸೋಹ ಹುಣ್ಣಿಮೆ
  • ಕಾಯಕಯೋಗಿ ಫೌಂಡೇಷನ್‌ನಿಂದ ಆಯೋಜನೆ
ಮಂಡ್ಯ: ಅನ್ನ, ಅರಿವು, ಆಸರೆಯಂತಹ ತ್ರಿವಿಧ ದಾಸೋಹವನ್ನು ಎಲ್ಲ ಸಮುದಾಯಕ್ಕೂ ನಡೆಸುತ್ತಾ ಬಂದಿರುವ ಸಿದ್ದಗಂಗಾಮಠದ ಸೇವೆ ಎಲ್ಲ ಮಠಗಳಿಗೂ ಮಾದರಿ. ರಾಜ್ಯಸರ್ಕಾರ ಬಿಸಿಯೂಟ ಯೋಜನೆ ಜಾರಿಗೊಳಿಸಲು ಶ್ರೀಮಠ ಸ್ಪೂರ್ತಿಯಾಗಿದ್ದು, ಸರ್ವರನ್ನೂ ಸಮಭಾವದಿಂದ ಕಂಡ ಸಿದ್ದಗಂಗಾ ಪೂಜ್ಯಶ್ರೀಗಳು ಎಂದೆಂದಿಗೂ ಅಮರ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.
ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿ ಉದ್ಯಾನದಲ್ಲಿ ಹುಣ್ಣಿಮೆಯ ಅಂಗವಾಗಿ ಕಾಯಕಯೋಗಿ ಫೌಂಡೇಷನ್‌ನಿಂದ ಆಯೋಜಿಸಿದ್ದ ದಾಸೋಹ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮಸಮಾಜವನ್ನು ನಿರ್ಮಾಣ ಮಾಡಲು ಭದ್ರ ಬುನಾದಿ ಹಾಕಿದ ವಿಶ್ವಗುರು ಬಸವಣ್ಣನವರ ತತ್ವವನ್ನು 21ನೇ ಶತಮಾನದಲ್ಲಿ ಅನುಷ್ಟಾನಗೊಳಿಸಿದ ಮಹಾನ್ ಮಾನವತಾವಾದಿ. ಸಿದ್ದಗಂಗಾ ಶ್ರೀಗಳ ನಿತ್ಯಸ್ಮರಣೆ ಮಂಡ್ಯದ ಉದ್ಯಾವನದಲ್ಲಿ ಹಸಿರಿನ ದಾಸೋಹದ ಮೂಲಕ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತ ಸಂಘದ ರೂಪಾ ಮಾತನಾಡಿ, ಸಕಾಲಕ್ಕೆ ಮಳೆಬಾರದೆ ಕೃಷಿ ಚಟುವಟಿಕೆಗಳು ಚುರುಕುಗೊಳ್ಳದೆ ರೈತ ಕಂಗಾಲಾಗಿ ಭೀಕರ ಬರಗಾಲ ಎದುರಾಗುವ ಪರಿಸ್ಥಿತಿಯನ್ನು ತಪ್ಪಿಸಲು ವರುಣನ ಕೃಪೆಯಾಗಬೇಕೆಂದು ದೇವರಲ್ಲಿ ಪ್ರಾರ್ಥಿಸಿ ಅನ್ನಸಂತರ್ಪಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಪರಿಸರ ಸೇವೆಯನ್ನೇ ಶಿವಪೂಜೆ ಎಂದು ಭಾವಿಸಿ ಕಳೆದ ಹಲವಾರು ವರ್ಷಗಳಿಂದ ನೂರಾರು ಸಸಿಗಳನ್ನು ನೆಟ್ಟು ಆಕರ್ಷಕವಾದ ಉದ್ಯಾನವನ ನಿರ್ಮಾಣ ಮಾಡಲು ಸಾರ್ವಜನಿಕರ ಸಹಕಾರ ಅಪಾರವಾಗಿದೆ ಎಂದರು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ಹಿರಿಯ ಉಪಾಧ್ಯಕ್ಷ ಶಿವಲಿಂಗಪ್ಪ, ಎಚ್.ಎಸ್.ಶಿವರುದ್ರಪ್ಪ, ವಿಜಯ್, ಬಸವಲಿಂಗ, ಕೃಷ್ಣೇ ಅರಸ್, ಮಹದೇವು, ಮಹೇಶ್, ರಾಮೇಗೌಡ ಇತರರಿದ್ದರು. ಗಮಕಿ ವಿದ್ಯಾಶಂಕರ್ ವಚನಗಾಯನ ನಡೆಸಿಕೊಟ್ಟರು.