ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಕಬ್ಬಿನ ಬೆಳೆ ಒಣಗುತ್ತಿರುವುದು.
- ವರುಣನ ಅವಕೃಪೆ, ನಾಲೆಗೆ ಹರಿಯದ ನೀರು
- ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಬೆಳೆಗಾರ
ಮದ್ದೂರು: ಪ್ರಸಕ್ತ ಹಂಗಾಮಿನಲ್ಲಿ ರೈತರ ಬದುಕಿಗೆ ವರುಣ ದೇವ ಬರೆ ಎಳೆದಿದ್ದಾನೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಕಬ್ಬು ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಆರ್ಥಿಕ ನಷ್ಟದ ಸುಳಿಯಲ್ಲಿ ಸಿಲುಕಿದಂತಾಗಿದೆ.
ಕಬ್ಬು ಬೆಳೆಗಾರರಿಗೆ ಸರ್ಕಾರ ಆದೇಶದ ಪ್ರಕಾರ 50 ರೂ. ಪ್ರೋತ್ಸಾಹ ಧನ ನೀಡುವ ಸಂಬಂಧಿಸಿದಂತೆ ತಾಲೂಕಿನಲ್ಲಿರುವ ಕೊಪ್ಪದ ಎನ್‌ಎಸ್‌ಎಲ್ ಹಾಗೂ ಭಾರತೀನಗರದ ಚಾಂಷುಗರ್ ಕಾರ್ಖಾನೆಗಳು ನ್ಯಾಯಾಲಯದ ಮೊರೆ ಹೋಗಿವೆ. ಈ ನಡುವೆ 50 ರೂ. ಪ್ರೋತ್ಸಾಹ ಧನವನ್ನು ಈ ಕೂಡಲೇ ಪಾವತಿಸಿ ನಂತರ ಕಬ್ಬು ಅರೆಯಬೇಕೆಂದು ಕಬ್ಬು ಬೆಳೆಗಾರರು, ರೈತ ಸಂಘದವರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಕಾರ್ಖಾನೆಗಳ ಮಾಲೀಕರ ವಿರುದ್ಧ ಹೋರಾಟ ಮಾಡಿದ್ದವು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವುದು ವಾಡಿಕೆಯಾಗಿದ್ದು, ಈ ಬಾರಿ ಒಂದು ತಿಂಗಳ ನಂತರ ಜು.10 ರಂದು ಶುಕ್ರವಾರದಿಂದ ತಾಲೂಕಿನ ಎರಡು ಕಾರ್ಖಾನೆಗಳನ್ನು ಕಬ್ಬು ಅರೆಯುವುದನ್ನು ಪ್ರಾರಂಭಿಸಿವೆ. ಒಂದು ತಿಂಗಳು ತಡವಾಗಿರುವುದರಿಂದ ರೈತರಿಗೆ ಹಲವು ರೀತಿಯಲ್ಲಿ ಸಮಸ್ಯೆ ಉಂಟಾಗಲಿದೆ.
ಹೌದು, ಈಗಾಗಲೇ ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯ ಒಂದು ತಿಂಗಳು ತಡವಾಗಿದೆ. ಕಬ್ಬು ಬೆಳೆ ಜಮೀನಲ್ಲೇ ಕಡಿಯದೆ ಹಾಗೆ ಉಳಿದು ಕೊಂಡಿದೆ. ಮೇಘರಾಜನ ಕೃಪೆಯಿಲ್ಲದೇ ಫಸಲು ಒಣಗುವ ಸ್ಥಿತಿಗೆ ಬಂದಿದೆ. ಇದರಿಂದ ಇಳುವರಿ ಕಡಿಮೆಯಾಗಿ ರೈತರಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ.
ಅಂತರ್ಜಲ ಕುಸಿತ, ವಿದ್ಯುತ್ ಕಡಿತ: ಸಕಾಲಕ್ಕೆ ಮಳೆ ಬಾರದ ಕಾರಣ ಅಂತರ್ಜಲಮಟ್ಟ ಕುಸಿಯುವ ಜತೆಗೆ ಕಬ್ಬು ಬೆಳೆಯಲು ನೀರಿನ ಸಮಸ್ಯೆ ಎದುರಾಗಿದೆ. ಬೋರ್‌ವೆಲ್ ನೀರು ನಂಬಿ ಕಬ್ಬು ಬೆಳೆಯುವ ಜಮೀನುಗಳಿಗೆ ನೀರು ಹಾಯಿಸಲು ಸಮರ್ಪಕವಾದ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಹಲವು ಸವಾಲುಗಳ ನಡುವೆಯೂ ಸಾಲಸೋಲ ಮಾಡಿ ಕಷ್ಟ ಪಟ್ಟು ಬೆಳೆದ ಕಬ್ಬು ಕಣ್ಣೆದುರೇ ಒಣಗುತ್ತಿರುವುದನ್ನು ರೈತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂಗಾರು ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಒಂದು ವೇಳೆ ಮಳೆ ಬಂದರು, ಕೆಆರ್‌ಎಸ್‌ನಿಂದ ನಾಲೆಗಳ ಮೂಲಕ ನೀರು ಹರಿಸಿದರೂ ಬಹುತೇಕ ಬೆಳೆ ಉಳಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ ಎಂದು ಕಬ್ಬು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಒಣಗಿದ ಕಬ್ಬಿನ ಬೆಳೆಯನ್ನು ಸರ್ವೇ ಮಾಡಿಸಿ ಸರ್ಕಾರದ ವೈಜ್ಞಾನಿಕ ಪರಿಹಾರ ಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬೆಳೆಗಾರರ ಹಿತ ಕಾಪಾಡಿ: ಕಾರ್ಖಾನೆಗಳು ಟನ್ ಕಬ್ಬಿಗೆ ಎಫ್‌ಆರ್‌ಪಿ ದರ 3383 ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಇದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಕಬ್ಬು ಬೆಳೆಯಲು ಕೂಲಿ, ಗೊಬ್ಬರ ಸೇರಿದಂತೆ ಇನ್ನಿತರ ಖರ್ಚುಗಳು ಇರುವುದರಿಂದ ಟನ್‌ಗೆ ಕನಿಷ್ಠ 5 ಸಾವಿರ ರೂ.ನೀಡಬೇಕು ಹಾಗೂ ಕಬ್ಬು ಸರಬರಾಜು ಮಾಡಿದ ನಂತರ ಕಬ್ಬಿನ ಹಣ ಶೀಘ್ರದಲ್ಲಿ ರೈತರ ಖಾತೆಗೆ ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕಬ್ಬು ಒಣಗಿ ಇಳುವರಿ ಕಡಿಮೆಯಾಗಿರುವುದರಿಂದ ಬೆಳೆಗಾರರ ಹಿತದೃಷ್ಟಿಯಿಂದ ಕಾರ್ಖಾನೆಯ ವತಿಯಿಂದಲೇ ಕಬ್ಬು ಕಾಟಾವು ಹಾಗೂ ಸಾಗಣೆ ವೆಚ್ಚ ಭರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕೃಪೆ ತೋರು ದೇವ: ಪ್ರಸ್ತುತ ಮಳೆ ಇಲ್ಲದೆ ಕಬ್ಬಿನ ಬೆಳೆೆ ಒಣಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದೆ ಹೋದರೆ ಭತ್ತ, ರಾಗಿ, ರೇಷ್ಮೆ ಸೇರಿದಂತೆ ಇನ್ನಿತರರ ಬೆಳೆಗಳು ಒಣಗುವ ಆತಂಕ ಮನೆ ಮಾಡಿದೆ. ಶೀಘ್ರವಾಗಿ ವರುಣ ಕೃಪೆ ತೋರದಿದ್ದರೆ ರೈತರಿಗೆ ಮತ್ತಷ್ಟು ಆತಂಕ ಹೆಚ್ಚಾಗಲಿದೆ. ಶೀಘ್ರದಲ್ಲೇ ಮಳೆ ಬಂದು ಒಣಗಿರುವ ಬೆಳೆಗಳಿಗೆ ಮರುಜೀವ ನೀಡಲಿ ಎಂದು ಬೆಳೆಗಾರರು ದೇವರನ್ನು ಹಗಲಿರುಳು ಪ್ರಾರ್ಥಿಸುವಂತಾಗಿದೆ.
ಕೊಪ್ಪದ ಎನ್.ಎಸ್.ಎಲ್.ಕಾರ್ಖಾನೆಯು ಶುಕ್ರವಾರದಿಂದ ಕಬ್ಬು ಅರೆಯುವುದನ್ನು ಪ್ರಾರಂಭಿಸಿದೆ. ಪ್ರಸಕ್ತ ವರ್ಷ 8.50 ಲಕ್ಷ ಮೆ.ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ಪ್ರತಿನಿತ್ಯ 5 ಸಾವಿರ ಮೆ.ಟನ್ ಕಬ್ಬು ಅರೆಯುವ ಸಾಮಾರ್ಥ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದೆ ಹೋದರೆ ರೈತರಿಗೂ ಹಾಗೂ ಕಾರ್ಖಾನೆಗೂ ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.