ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಮಂಡ್ಯ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  
ಮಂಡ್ಯ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ವಿರೋಧ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ
  • ಡಿಸಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಕೆ
ಮಂಡ್ಯ: ಮೂಲನಿವಾಸಿಗಳು, ಬಹುಜನರಿಗೆ ಸಂವಿಧಾನ ಕೊಟ್ಟ ಹಕ್ಕನ್ನು ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನೆಪದಲ್ಲಿ ಮತದಾನದ ಹಕ್ಕು ಮತ್ತು ಭಾರತೀಯ ನಾಗರಿಕ ಹಕ್ಕನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಮತ್ತು ಭಾರತ ಚುನಾವಣಾ ಆಯೋಗ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಮತದಾರರ ಹಕ್ಕನ್ನು ಭಾರತೀಯ ಮೂಲ ನಿವಾಸಿಗಳಾದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಹುಜನರೆಲ್ಲರಿಗೂ ಕಾಂಗ್ರೆಸ್ಸಿಗರ ವಿರೋಧವನ್ನೂ ಲೆಕ್ಕಿಸದೆ ಚುನಾವಣಾ ಆಯೋಗ ಎಸ್‌ಐಆರ್ ನಡೆಸುವ ಮೂಲಕ ಮೂಲನಿವಾಸಿಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.
ವಿಶೇಷ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಪಟ್ಟಿಯಲ್ಲಿನ ನ್ಯೂನತೆಯನ್ನು ಅಗತ್ಯವಾದ ಸಾಮಾನ್ಯ ದಾಖಲೆಗಳ ಪರಿಶೀಲನೆ ಮಾಡುವುದಾಗಿದೆ. ಆದರೆ ಕೇಂದ್ರ ಸರ್ಕಾರ ಹಲವು ರಾಜ್ಯಗಳಲ್ಲಿ ಕೋಟ್ಯಂತರ ಮತದಾರರನ್ನು ವಿಶೇಷ ಮತದಾರರ ಪಟ್ಟಿಯ ನೆಪದಲ್ಲಿ ಅನರ್ಹಗೊಳಿಸುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಿಸೆಂಬರ್ 2023ರಲ್ಲಿ ಭಾರತ ಸಂವಿಧಾನ ವಿರೋಧಿಯಾದ ಕಾಯ್ದೆಯನ್ನು ಮಾಡುವ ಮೂಲಕ ಸ್ವಾಯತ್ತ ಸಂಸ್ಥೆಯಾದ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಕೈಬಿಡುವ ಕಾಯ್ದೆಯನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಡಿಸೆಂಬರ್ 2023ರಲ್ಲಿ ಭಾರತ ಸಂವಿಧಾನ ವಿರೋಧಿಯಾದ ಕಾಯ್ದೆಯನುಸಾರ ಸ್ವಾಯತ್ತ ಸಂಸ್ಥೆಯಾದ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ಕುಮಾರ್ ಅವರನ್ನು ಅಕ್ರಮ ನೇಮಕಾತಿಯನ್ನು ಈ ಕೂಡಲೇ ರದ್ದುಪಡಿಸಬೇಕು. ಭಾರತೀಯ ಮೂಲ ನಿವಾಸಿಗಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಮತದಾನದ ಹಕ್ಕನ್ನು ಎಸ್‌ಐಆರ್ ನೆಪದಲ್ಲಿ ಕಸಿದುಕೊಳ್ಳುವ ಕೇಂದ್ರ ಸರ್ಕಾರ ಮತ್ತು ಭಾರತ ಚುನಾವಣಾ ಆಯೋಗದ ಷಡ್ಯಂತ್ರದ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಈ ಕೂಡಲೇ ತಡೆಯಲೇಬೇಕು ಎಂದು ಆಗ್ರಹಿಸಿದರು.
ಭಾರತ ಸಂವಿಧಾನ ಬದ್ದ ಮುಕ್ತ ಮತ್ತು ನ್ಯಾಯ ಸಮ್ಮತವಾದ ಹಾಗೂ ಪಾರದರ್ಶಕ ಚುನಾವಣೆಗೆ ವಿರೋಧಿಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಂತಾದ ಮನುವಾದಿ ರಾಜಕೀಯ ಪಕ್ಷಗಳ ಅಕ್ರಮ ಚುನಾವಣೆ ಮತ್ತು ಮತ ವ್ಯಾಪಾರೀಕರಣ ನೀತಿಯನ್ನು ಈ ಕೂಡಲೇ ತಡೆಯಬೇಕು. ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಆನಂದ್, ಮುಖಂಡರಾದ ಸುಶ್ಮಿತಾ, ನಾಗರಾಜು, ವೆಂಕಟೇಶ್, ಸುಧಾ, ಮುತ್ತುರಾಜು, ಸ್ವಾಮಿ, ವಿಮಲಾ, ಸಿದ್ದಯ್ಯ ಇತರರಿದ್ದರು.