ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 
ಮಂಡ್ಯ

ಬೀದರ್‌ನಲ್ಲಿ ನಡೆದ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ನಿಷ್ಪಕ್ಷಪಾತ ತನಿಖೆ ನಡೆಸಲು ಎಸ್‌ಐಟಿಗೆ ವಹಿಸಲಿ
  • ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು
ಮಂಡ್ಯ: ಬೀದರ್ ಜಿಲ್ಲೆಯ ದಲಿತ ಸಮುದಾಯದ ಕ್ರೀಡಾ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಎಸ್‌ಐಟಿಗೆ ವಹಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ನಂತರ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರಕರಣವನ್ನು ಜಿಲ್ಲಾಡಳಿತವೇ ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಬೇಲಿಯೇ ಎದ್ದು ಹೊಲ ಮೇದಂತಾಗಿದೆ ಎಂದು ಕಿಡಿಕಾರಿದರು.
ದಲಿತ ಸಮುದಾಯದ ಅಪ್ರಾಪ್ತ ಬಾಲಕಿ ಕಬಡ್ಡಿ ಮತ್ತು ಕುಸ್ತಿಪಟುವಾಗಿದೆ. ತರಬೇತುದಾರ ಲಖನ್ ಬಳಿ ತರಬೇತಿ ಪಡೆಯುತ್ತಿದ್ದಳು. 2024ರಿಂದ ತರಬೇತಿ ನೆಪದಲ್ಲಿ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದು, ತರಬೇತಿ ಶುಲ್ಕವಾಗಿ 1.30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದನು. ಅದರಂತೆ 60 ಸಾವಿರ ರೂ ನೀಡಲಾಗಿತ್ತು. ಉಳಿಕೆ ಹಣಕ್ಕೆ ಒತ್ತಡ ಹಾಕಿದ್ದಾಗ ಬಾಲಕಿ ಏಪ್ರಿಲ್ನಲ್ಲಿ ಮನೆಗೆ ಮರಳಿದ್ದಳು. ಆದರೆ ಮೇ 8ರಂದು ಬಾಲಕಿಯನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ. ಇಷ್ಟೆಲ್ಲ ಮಾಹಿತಿ ಇದ್ದರೂ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ವಿರೋಧ ಹೆಚ್ಚಾದಾಗ ಆತ್ಮಹತ್ಯೆಗೆ ಪ್ರಚೋದನೆ ಎಂದು ದಾಖಲಿಸಿಕೊಂಡಿದ್ದಾರೆ. ಇದಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಿ ಸಂಧಾನ ನಡೆಸುವ ಪ್ರಯತ್ನ ಮಾಡಿರುವುದನ್ನು ನೋಡಿದರೆ ಲಖನ್ ಸ್ವಜಾತಿಯ ಸ್ಥಳೀಯ ಶಾಸಕರ ಕೈವಾಡ ಇರುವುದು ಕಂಡು ಬಂದಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲಾಗದ ಕಾಂಗ್ರೆಸ್ ನೇತೃತ್ವದ ಸರ್ಕಾರ ದಲಿತರ ಮಾನ-ಪ್ರಾಣ- ಆಸ್ತಿಯನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಕೂಡಲೇ ಸರ್ಕಾರ ಎಚ್ಚೆತ್ತು ಅಪ್ರಾಪ್ತ ಕ್ರೀಡಾ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಎಸ್‌ಐಟಿಗೆ ವಹಿಸಿ, ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ದಲಿತರ ಮಾನ-ಪ್ರಾಣ- ಆಸ್ತಿ ರಕ್ಷಣೆಗೆ ಮುಂದಾಗಬೇಕು. ಪ್ರಕರಣವನ್ನು ದಿಕ್ಕು ತಪ್ಪಿಸಲು ಶಾಸಕರೊಬ್ಬರ ತಾಳಕ್ಕೆ ಕುಣಿಯುತ್ತಿರುವ ಬೀದರ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್ಕುಮಾರ್, ಬಿ.ಆನಂದ್, ಸುಶ್ಮಿತಾ, ಸುಧಾ, ಮುತ್ತರಾಜು, ಕರಿಯಪ್ಪ, ಸ್ವಾಮಿ, ಪುಟ್ಟಲಿಂಗಯ್ಯ, ವಿಮಲಾ ಇತರರಿದ್ದರು.