ಮದ್ದೂರು ತಾಲೂಕಿನ ಅಂಕೇಗೌಡನಡೊಂಡ್ಡಿಯಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಕೆ.ಎಂ.ಉದಯ್ ಉದ್ಘಾಟಿಸಿದರು. ಶೋಭಾ, ಚವಿ, ಹರೀಶ್‌ಬಾಬು, ಪಿ.ಸಂದರ್ಶ ಇದ್ದರು.
- ಶಾಸಕ ಕೆ.ಎಂ.ಉದಯ್ ಅಭಿಮತ
- ಅಂಕೇಗೌಡನಡೊಂಡ್ಡಿಯಲ್ಲಿ ಡೇರಿ ಕಟ್ಟಡ ಉದ್ಘಾಟನೆ
ಮದ್ದೂರು: ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಜಿಲ್ಲಾ ಹಾಲು ಒಕ್ಕೂಟದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.
ತಾಲೂಕಿನ ಅಂಕೇಗೌಡನಡೊಂಡ್ಡಿಯಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಹಾಲು ಪೂರೈಸಬೇಕೆಂದರು.
ಹಳ್ಳಿಗಳಲ್ಲಿ ಮಹಿಳೆಯರಿಗೆ ಹೈನುಗಾರಿಕೆ ವರದಾನವಾಗಿದ್ದು, ಹೆಚ್ಚು ಕುಟುಂಬಗಳು ಇದನ್ನೇ ಅವಲಂಬಿಸಿವೆ. ಮಹಿಳೆಯರು ಕುಟುಂಬದಲ್ಲಿ ಹಣಕಾಸಿನ ವಿಷಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ, ಹೀಗಾಗಿಯೇ ನಿಮ್ಮ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಮಹಿಳೆಯರೇ ನಿರ್ವಹಿಸುತ್ತಿರುವುದರಿಂದ ಕಳೆದ ಸಾಲಿನಲ್ಲಿ 10 ಲಕ್ಷ ರೂ. ಲಾಭದಲ್ಲಿದೆ ಎಂದರು.
ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದ್ದರೆ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದ ಅವರು, ಮುಂದಿನ ದಿನಗಳಲ್ಲಿ ಸಂಘಕ್ಕೆ ಸೇರಿದಂತೆ ನೀವು ಕೇಳಿರುವ ಎಲ್ಲ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕೆಲಸಗಳಿಗೆ ಇನ್ನಷ್ಟು ಗಮನ ನೀಡುತ್ತೇನೆ ಎಂದರು.
ಮನ್ ಮುಲ್ ನಿರ್ದೇಶಕ ಹರೀಶ್ ಮಾತನಾಡಿ, ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಸಹಕಾರ ಸಂಘಕ್ಕೆ ಸರಬರಾಜು ಮಾಡಿದಾಗ ಮಾತ್ರ ಸಂಘವು ಉತ್ತಮ ಮಟ್ಟದಲ್ಲಿ ನಡೆಯುತ್ತದೆ. ಲಾಭವೂ ಬರುತ್ತದೆಯಲ್ಲದೇ, ಒಕ್ಕೂಟವೂ ಕೂಡ ಸದೃಢವಾಗುವುದರ ಜತೆಗೆ ಹಾಲು ಉತ್ಪಾದಕರಿಗೆ ಮತ್ತಷ್ಟು ಅನುಕೂಲಗಳನ್ನು ದೊರಕಿಸಿಕೊಡಲು ಸಾಧ್ಯವೆಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಸಂಘದ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಚವಿ, ನಿರ್ದೇಶಕಿಯರಾದ ಹರ್ಷಿತಾ, ನಾಗರತ್ನಾ, ಅನಿತಾ, ಸುಧಾ, ಸುಮಿತ್ರಾ, ಸಾವಿತ್ರಮ್ಮ, ಲತಾ, ದಿವ್ಯಾ, ಕಾರ್ಯದರ್ಶಿ ಸಾಕಮ್ಮ, ಮುಖಂಡರಾದ ಪಾಪಣ್ಣ, ಶ್ರೀನಿವಾಸ್‌ಗೌಡ, ಮನು, ಜಯರಾಮು, ತಿಮ್ಮೆ ಗೌಡ, ಸಿದ್ದರಾಜು ಸೇರಿದಂತೆ ಹಲವರು ಹಾಜರಿದ್ದರು.