ಬಸರಾಳು ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
- ಕಾಲಭೈರವೇಶ್ವರಸ್ವಾಮಿ ಜಾತ್ರೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ
- ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ್ಯಾಂಕ್ ಪಡೆದ ಧನಂಜಯಗೆ ಸನ್ಮಾನ
ಮಂಡ್ಯ: ಬಸರಾಳು ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಇದು ನೂರಾರು ವರ್ಷದ ಇತಿಹಾಸ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೆರಗೋಡು ಹಾಗೂ ಹೊಸ ಬೂದನೂರು ಉತ್ಸವದ ಮಾದರಿಯಲ್ಲಿಯೇ ಬಸರಾಳು ಉತ್ಸವ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ಗ್ರಾಮದಲ್ಲಿ ಕಾಲಭೈರವೇಶ್ವರಸ್ವಾಮಿ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಂಜನಗೂಡು ನಂಜುಂಡೇಶ್ವರಸ್ವಾಮಿ ದೇವಸ್ಥಾನದ ಮಾದರಿಯಲ್ಲಿ ಕೆರಗೋಡು ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನವನ್ನ ಅಭಿವೃದ್ಧಿಪಡಿಸಲಾಗುವುದು. ಅದೇ ರೀತಿ ಬಸರಾಳು ಕಾಲಭೈರವೇಶ್ವರಸ್ವಾಮಿ ದೇವಸ್ಥಾನವನ್ನು 5 ಕೋಟಿ ರೂ ಅಂದಾಜು ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು. ಇದರ ಸಂಪೂರ್ಣ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತೇನೆ ಎಂದರು
ಕಳೆದ ಎರಡೂವರೆ ವರ್ಷದಿಂದ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯುತ್ತಿದೆ. ಹಿಂದೆ ಮಂಡ್ಯದಿಂದ ಬಸರಾಳಿಗೆ ಪ್ರಯಾಣದ ಸಮಯ ಒಂದು ಗಂಟೆ ಆಗುತ್ತಿತ್ತು. ಇದೀಗ ರಸ್ತೆ ಅಭಿವೃದ್ಧಿಯಾಗಿರುವುದರಿಂದ 25 ನಿಮಿಷ ಸಾಕು. ಬಸರಾಳು ಭಾಗದ ರಸ್ತೆ ಹಾಗೂ ನಾಲೆಗಳ ಆಧುನೀಕರಣಕ್ಕೆ 250 ಕೋಟಿ ರೂ ಅನುದಾನ ನೀಡಲಾಗಿದೆ. ಆದರೆ ವಿರೋಧ ಪಕ್ಷದವರು ಹೊಟ್ಟೆಕಿಚ್ಚಿಗೆ ಮಾತನಾಡುತ್ತಾರೆ. ಬಸರಾಳು ಭಾಗದ ಎಲ್ಲ ನಾಲೆಗಳ ಅಭಿವೃದ್ಧಿಗೆ 350 ಕೋಟಿ ರೂ ಕೇಳಿದ್ದೇನೆ. ಅದಕ್ಕೆ ಸಿಎಂ, ಡಿಸಿಎಂ ಸ್ಪಂದಿಸುವ ವಿಶ್ವಾಸವಿದೆ. ಹೇಮಾವತಿ ನಾಲೆ ಆಧುನೀಕರಣಕ್ಕೆ ಕ್ಯಾಬಿನೆಟ್‌ನಲ್ಲಿ 100 ಕೋಟಿ ರೂ ನೀಡಿದ್ದಾರೆ. ಶೀಘ್ರವಾಗಿ ಟೆಂಡರ್ ಆಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಬಸರಾಳು ಹೋಬಳಿ ಮುದ್ದನ ಘಟ್ಟ ಗ್ರಾಮದ ಬಳಿ ಸರ್ಕಾರಿ ಜಮೀನಿನಲ್ಲಿ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೂತನ ವಸತಿ ಶಾಲೆ ಅಂದಾಜು 35 ಕೋಟಿ ರೂ ವೆಚ್ಚದಲಿ ನಿರ್ಮಾಣ ಆಗಲಿದೆ. ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ. ಬಸರಾಳು, ನಾಗಮಂಗಲ ತಾಲೂಕಿನ ದೇವಲಾಪುರ ಹಾಗೂ ಹೊಣಕೆರೆ ಹೋಬಳಿಗೆ ಕಾವೇರಿ ನೀರು ಹರಿಸುವ ಯೋಜನೆಗೆ ನಾನು ಮತ್ತು ನಮ್ಮ ಸಚಿವ ಎನ್.ಚಲುವರಾಯಸ್ವಾಮಿ ಅವರು 1,200 ಕೋಟಿ ರೂ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದರಂತೆ ಅನುದಾನ ತಂದು ಶ್ರೀರಂಗಪಟ್ಟಣದಿಂದ ಕಾವೇರಿ ನೀರು ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಯೋಗೇಶ್, ಮಾಜಿ ಅಧ್ಯಕ್ಷ ಬಿ.ಆರ್.ಕೃಷ್ಣೇಗೌಡ, ಹೋಟೆಲ್ ಲಿಂಗರಾಜು, ಬ್ರಾಹ್ಮಣ ಸಮಾಜದ ಅಧ್ಯಕ್ಷ ಮಧುಸೂದನ್, ಮುಖಂಡರಾದ ಸಿದ್ಧಾರೂಢ ಸತೀಶ್, ಬಿ.ಟಿ.ಶಂಕರ್, ರಾಜು, ಚಂದ್ರು, ನಾಗೇಶ್, ನಿಂಗರಾಜು, ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಬಿ.ಆರ್.ರವಿ ಇತರರಿದ್ದರು. ಇದೇ ವೇಳೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ್ಯಾಂಕ್ ಪಡೆದ ನಾಗಮಂಗಲ ತಾಲೂಕು ಕರಡಳ್ಳಿ ಗ್ರಾಮದ ಧನಂಜಯ ಅವರನ್ನು ಸನ್ಮಾನಿಸಲಾಯಿತು.