ಮಂಡ್ಯ ತಾಲೂಕು ಚನ್ನಪ್ಪನದೊಡ್ಡಿ ಗ್ರಾಮದ ಪ್ರಗತಿಪರ ರೈತ ಕೆಂಪೇಗೌಡ ಅವರ ಜಮೀನಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ ಕೊಟ್ಟು ಬೇಸಾಯ ಪದ್ಧತಿ ಪರಿಶೀಲಿಸಿದರು. 
ಮಂಡ್ಯ

ಸಮಗ್ರ ಕೃಷಿಯಿಂದ ಸುಸ್ಥಿರ ಆದಾಯ: ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಚನ್ನಪ್ಪನದೊಡ್ಡಿಯಲ್ಲಿ ಬೆಳೆ ಪದ್ಧತಿ ಪರಿಶೀಲನೆ

ಮಂಡ್ಯ:

ಹವಾಮಾನ ಬದಲಾವಣೆ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಕಠಿಣ ಸನ್ನಿವೇಶಗಳಲ್ಲಿ ಬೆಳೆಗಳನ್ನು ರಕ್ಷಿಸಿಕೊಳ್ಳಲು, ನಷ್ಟವನ್ನು ತಡೆಯಲು ಮತ್ತು ನಿರಂತರ ಸುಸ್ಥಿರ ಆದಾಯ ಪಡೆಯಲು ’ಹವಾಮಾನ ಸ್ಥಿತಿಸ್ಥಾಪಕತ್ವ’ ಕೃಷಿ ಪದ್ಧತಿಯನ್ನು ರೈತರ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.

ತಾಲೂಕಿನ ಕೊತ್ತತ್ತಿ ಹೋಬಳಿ ಚನ್ನಪ್ಪನದೊಡ್ಡಿ ಗ್ರಾಮದ ನೈಸರ್ಗಿಕ ಕೃಷಿಕ ಕೆಂಪೇಗೌಡ ಅವರ ಜಮೀನಿಗೆ ಭೇಟಿ ನೀಡಿ ಕೃಷಿ ಪದ್ಧತಿಯ ಬಗ್ಗೆ ಪರಿಶೀಲಿಸಿ ಮಾತನಾಡಿದರು. ಮಣ್ಣಿನ ಆರೋಗ್ಯ ಸುಧಾರಣೆ ಇಂದಿನ ಆದ್ಯತೆಯಾಗಬೇಕಿದೆ. ಜಿಲ್ಲೆಯಲ್ಲಿ ರೈತರು ಏಕಬೆಳೆ ಬೆಳೆಯುವುದರ ಬದಲಾಗಿ ಸಮಗ್ರ ಕೃಷಿ ಪದ್ಧತಿ, ನೈಸರ್ಗಿಕ ಕೃಷಿ ಅಥವಾ ಸಾವಯವ ಕೃಷಿ ಪದ್ಧತಿಗಳಿಗೆ ಹೆಚ್ಚಿನ ಮನ್ನಣೆ ನೀಡಿ. ಸುಸ್ಥಿರ ಆದಾಯಕ್ಕಾಗಿ ಕೃಷಿ ನಂತರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಒಳಗೊಂಡಂತೆ ವಿವಿಧ ಆದಾಯೋತ್ಪನ್ನ ಚಟುವಟಿಕೆಗಳಿಗೆ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಜಿಲ್ಲೆಯಲ್ಲಿ ಅನಾವೃಷ್ಟಿ ಪರಿಸ್ಥಿತಿಯಿದ್ದು, ಅಲ್ಪಾವಧಿ ಹಾಗೂ ಕಡಿಮೆ ನೀರಿನಿಂದ ನಿರೀಕ್ಷಿತ ಉತ್ಪಾದನೆ ಪಡೆಯಬಹುದಾದ ಪರ್ಯಾಯ ಬೆಳೆಗಳನ್ನು ಆಯ್ಕೆಮಾಡಿಕೊಳ್ಳಬೇಕಿದೆ. ಸಮರ್ಥ ನೀರಿನ ಬಳಕೆಗಾಗಿ ಹನಿ ಅಥವಾ ತುಂತುರು ನೀರಾವರಿ ಘಟಕ, ಸಂರಕ್ಷಣಾತ್ಮಕ ನೀರಾವರಿಗಾಗಿ ಕೃಷಿ ಹೊಂಡ ಬಳಕೆಯ ವಿಧಾನಗಳನ್ನು ಅನುಸರಿಸಬೇಕಿದೆ. ಒಂದೇ ಬೆಳೆ ಬದಲಾಗಿ ವಿವಿಧ ಬೆಳೆಗಳನ್ನು ಬೆಳೆದಾಗ ಹವಾಮಾನ ಬದಲಾವಣೆಗೆ ನಷ್ಟದ ಪ್ರಮಾಣ ಕಡಿಮೆಯಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆಂಪೇಗೌಡ ಅವರು ಕಳೆದ 10 ವರ್ಷದಿಂದ ನೈಸರ್ಗಿಕ ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸುಸ್ಥಿರತೆ ಸಾಧಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ. ಇವರು 2 ಎಕರೆ ಜಮೀನು ಹೊಂದಿದ್ದು, ನೈಸರ್ಗಿಕ ಕೃಷಿ ಪದ್ದತಿಯಲ್ಲಿ ಭತ್ತ, ಕಬ್ಬು, ಸೊಪ್ಪು, ತರಕಾರಿ ಹಾಗೂ ಹಲವಾರು ಹಣ್ಣು ಬೆಳೆಗಳನ್ನು ಬೆಳೆದು ತಮ್ಮದೆ ಮಳಿಗೆಯಲ್ಲಿ ಹಾಗೂ ಪ್ರತಿ ಬುಧವಾರ ಹಾಗೂ ಭಾನುವಾರ ಮಂಡ್ಯ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಎದುರು ನಡೆಯುವ ಸಾವಯವ ಸಂತೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಿ ನಿರಂತರ ಆದಾಯ ಗಳಿಸುತ್ತಿದ್ದಾರೆ. ಇದು ಉಳಿದ ರೈತರಿಗೂ ಮಾದರಿಯಾಗಲಿ ಎಂದು ತಿಳಿಸಿದರು.
ಕಳೆದ ಐದು ವರ್ಷದಿಂದ 12 ಅಡಿ ಅಂತರದ ಪಟದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಕಬ್ಬು ಬೆಳೆದು, ಪ್ರತಿನಿತ್ಯ ಇವರು 40-50 ಕೆ.ಜಿ. ಕಬ್ಬು ಮಾತ್ರ ಕಟಾವು ಮಾಡಿ ಮಂಡ್ಯ ನಗರದಲ್ಲಿ ತಮ್ಮ ಖುಷಿ ಆರ್ಗ್ಯಾನಿಕ್ ಮಳಿಗೆಯಲ್ಲಿ ಕಬ್ಬಿನ ಜ್ಯೂಸ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಟನ್ ಕಬ್ಬಿನಿಂದ 700 ಲೀಟರ್ ಜ್ಯೂಸ್ ಸಿದ್ದಪಡಿಸಿ 50,000 ರೂವರೆಗೆ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ತಾವು ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಕೆ ಸಹ ಮಾಡಿ ಮಾರಾಟ ಮಾಡುತ್ತಿದ್ದಾರೆ. 12 ಅಡಿ ಅಂತರದ ಪಟದಲ್ಲಿ ಲಭ್ಯವಿರುವ ಜಾಗದಲ್ಲಿ ವಿವಿಧ ಬ್ಯಾಚ್‌ಗಳಲ್ಲಿ ಮೆಂತ್ಯ, ಪಾಲಕ್, ಸಪ್ಸಿಗೆ, ಕೊತ್ತಂಬರಿ, ಕಿಲಕಿರೆ, ದಂಟು ಸೊಪ್ಪು ಹಾಗೂ ಬೆಂಡೆ ಬೆಳೆಗಳನ್ನು ಬೆಳೆಯುತ್ತಿರುವುದು ಉತ್ತಮ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ಸಹಾಯಕ ಯೋಜನಾಧಿಕಾರಿ ಜಿ.ಶ್ರೀಹರ್ಷ ಇದ್ದರು.