ಮಳವಳ್ಳಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಾರ್ವಜನಿಕರ ಅಹವಾಲು ಆಲಿಸಿದರು. 
ಮಂಡ್ಯ

ಬೆಳೆ ಕಟಾವು ಸಮೀಕ್ಷೆ ನಿಖರವಾಗಿರಲಿ: ಜಿ.ಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಪಟ್ಟಣದಲ್ಲಿ ನಡೆದ ತರಬೇತಿಯಲ್ಲಿ ಭಾಗಿ

ಮಳವಳ್ಳಿ:

ಪ್ರಸಕ್ತ ಸಾಲಿನಲ್ಲಿ ಎಲ್ ನಿನೋ ಪರಿಣಾಮದಿಂದ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಳೆಗಳ ವಾಸ್ತವಿಕ ಇಳುವರಿ ಹಾಗೂ ಬೆಳೆ ನಷ್ಟದ ನಿಖರ ಅಂದಾಜು ಮಾಡಲು ಬೆಳೆ ಕಟಾವು ಸಮೀಕ್ಷೆಯನ್ನು ನಿಯಮಾನುಸಾರ ಮತ್ತು ವೈಜ್ಞಾನಿಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ನಿರ್ದೇಶನ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಳೆ ಕಟಾವು ಸಮೀಕ್ಷೆಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬೆಳೆ ಕಟಾವು ಸಮೀಕ್ಷೆಯಿಂದ ಲಭ್ಯವಾಗುವ ನಿಖರವಾದ ದತ್ತಾಂಶವು ಜಿಲ್ಲೆಯ ಬೆಳೆ ಇಳುವರಿ ಅಂದಾಜು, ರೈತರ ಬೆಳೆ ನಷ್ಟದ ಪ್ರಮಾಣ ಹಾಗೂ ಸರ್ಕಾರದ ವಿವಿಧ ಪರಿಹಾರ ಮತ್ತು ವಿಮಾ ಸಂಬಂಧಿತ ಕ್ರಮಗಳಿಗೆ ಪ್ರಮುಖ ಆಧಾರವಾಗಲಿದೆ. ಆದ್ದರಿಂದ ಸಮೀಕ್ಷಾ ಕಾರ್ಯವನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವುದರ ಜತೆಗೆ ಯಾವುದೇ ಲೋಪದೋಷಗಳಿಗೆ ಅವಕಾಶವಿಲ್ಲದಂತೆ ನಿಖರವಾಗಿ ಹಾಗೂ ಪಾರದರ್ಶಕವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಮೀಕ್ಷೆಯ ಸಂದರ್ಭದಲ್ಲಿ ಆಯ್ಕೆಯಾಗಿರುವ ಜಮೀನಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಖುದ್ದಾಗಿ ಭೇಟಿ ನೀಡಿ ನಿಗದಿತ ವಿಧಾನದಂತೆ ಮಾದರಿ ಪ್ರದೇಶವನ್ನು ಗುರುತಿಸಿ ಬೆಳೆ ಕಟಾವು ನಡೆಸಬೇಕು. ಕಟಾವು ಮಾಡಿದ ಬೆಳೆಯನ್ನು ನಿಖರವಾಗಿ ತೂಕ ಮಾಡಿ, ಅಗತ್ಯವಿರುವ ಎಲ್ಲಾ ವಿವರಗಳನ್ನು ಸಮೀಕ್ಷಾ ಆ್ಯಪ್‌ನಲ್ಲಿ ಸಮರ್ಪಕವಾಗಿ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.
ತಾಪಂ ಕಚೇರಿಯಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿ, ಕಚೇರಿಯ ಎಲ್ಲ ಕಡತಗಳನ್ನು ತಂತ್ರಾಂಶದ ಮೂಲಕವೇ ರವಾನಿಸಬೇಕು. ಕಚೇರಿಯ ಎಲ್ಲ ಸಿಬ್ಬಂದಿ ಕರ್ತವ್ಯ ಆ್ಯಪ್ ಮೂಲಕ ನಿಯಮಿತವಾಗಿ ಹಾಜರಾತಿ ದಾಖಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ತಾಪಂ ಇಒ ಶ್ರೀನಿವಾಸ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೇಶವಮೂರ್ತಿ, ತಾಲೂಕು ಯೋಜನಾಧಿಕಾರಿ ದೀಪು ಇತರರಿದ್ದರು.