ಕೆ.ಆರ್.ಸಾಗರ ಅಣೆಕಟ್ಟೆ ಹಿನ್ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ ಮಧುವಿಗಾಗಿ ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿಎಸ್‌ಐ ರಮೇಶ್ ಕರ್ಕಿಕಟ್ಟೆ ನೇತೃತ್ವದಲ್ಲಿ ಅಗ್ನಿಶಾಮಕದಳ, ಸ್ಥಳೀಯ ಮೀನುಗಾರರು, ನುರಿತ ಈಜುಗಾರರು ಮತ್ತು ಈಶ್ವರ್ ಮಲ್ಪೆ ತಂಡದವರು ಹುಡುಕಾಟ ನಡೆಸಿದರು.
ಕೆ.ಆರ್.ಸಾಗರ : ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ.ಗಿರಿಯಾರಹಳ್ಳಿ ಗ್ರಾಮದ ಕೆ.ಆರ್.ಸಾಗರ ಅಣೆಕಟ್ಟು ಹಿನ್ನೀರಿನಲ್ಲಿ ಶುಕ್ರವಾರ ಸಂಜೆ ವೃತ್ತಿಯಲ್ಲಿ ಮೀನುಗಾರನಾಗಿದ್ದ ಮಧು(26)ಹರಿಗೋಲಿನಲ್ಲಿ ಮೀನು ಹಿಡಿಯಲು ಹೋಗಿದ್ದಾಗ ದಿಢೀರ್ ಬೀಸಿದ ಜೋರು ಗಾಳಿಗೆ ಹರಿಗೋಲು ಸಮೇತ ನಾಪತ್ತೆಯಾಗಿದ್ದ. ಭಾನುವಾರ ಮಧ್ಯಾಹ್ನ ಆತನ ಶವ ಸಿಕ್ಕಿದೆ.
ಶನಿವಾರ ಶೋಧಕಾರ್ಯ ನಡೆಸಿದರೂ ಶವ ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಮಧುವಿಗಾಗಿ ಕೆ.ಆರ್.ಸಾಗರದ ಹಿನ್ನೀರಿನಲ್ಲಿ ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿಎಸ್‌ಐ ರಮೇಶ್ ಕರ್ಕಿಕಟ್ಟೆ ನೇತೃತ್ವದಲ್ಲಿ ಅಗ್ನಿಶಾಮಕದಳ, ಸ್ಥಳೀಯ ಮೀನುಗಾರರು, ನುರಿತ ಈಜುಗಾರರು ಮತ್ತು ಈಶ್ವರ್ ಮಲ್ಪೆ ತಂಡ ಸತತ ಹುಡುಕಾಟ ನಡೆಸಿದ ಪರಿಣಾಮ ಮಧ್ಯಾಹ್ನ ಗಿರಿಯಾರಹಳ್ಳಿ ಸಮೀಪದ ಕಾವೇರಿ ಹಿನ್ನೀರಿನಲ್ಲಿ ಶವ ಸಿಕ್ಕಿತು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಘಟನೆ ನಡೆದ ಸ್ಥಳ ಹಾಗೂ ಮೃತ ಮಧು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ, ಸಹಾಯದ ಭರವಸೆಯನ್ನೂ ನೀಡಿದರು.