ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಕುಂದುಕೊರತೆ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಅಹವಾಲು ಸ್ವೀಕರಿಸಿದರು. ಎನ್.ಎಂ.ಪ್ರಕಾಶ್, ಚಲುವರಾಜು, ಖುದ್ದುಸ್, ತೈಲೂರು ರಘು, ಎಚ್.ಎಲ್.ಸತೀಶ್ ಸೇರಿದಂತೆ ಇತರರು ಇದ್ದರು.  
ಮಂಡ್ಯ

ಪಂಚ ಗ್ಯಾರಂಟಿಯಿಂದ ಇತಿಹಾಸ ಸೃಷ್ಟಿ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಮೆಚ್ಚುಗೆ
  • ಕುಂದುಕೊರತೆ ಸಭೆ

ಮದ್ದೂರು:

ರಾಜ್ಯದ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳ ಮುಖಾಂತರ ವರ್ಷಕ್ಕೆ 52 ಸಾವಿರ ಕೋಟಿ ರೂ.ಗಳನ್ನು ನೀಡುವ ಮೂಲಕ ದೇಶದಲ್ಲಿ ಇತಿಹಾಹ ಸೃಷ್ಟಿಸಿರುವ ಸರ್ಕಾರ ಎಂದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಶುಕ್ರವಾರ ಗ್ರಾ.ಪಂ. ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಜನಪರವಾಗಿದೆ. ಜನರು ಕಾಂಗ್ರೆಸ್ ಪರವಾಗಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳ ಜತೆಗೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ 2 ಸಾವಿರ ರೂ.,ಕೋಟಿಗೂ ಅಧಿಕ ಅನುದಾನ ನೀಡುವ ಮೂಲಕ ತಾಲೂಕಿನಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಸಹಕಾರ ನೀಡಿದೆ. ಮುಂದೆಯೂ ಬಹಳಷ್ಟು ಅನುದಾನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ನಗರಸಭೆ, ಗ್ರಾ.ಪಂ., ತಾ.ಪಂ., ಜಿ.ಪಂ ಸೇರಿದಂತೆ ಸ್ಥಳಿಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಷ್ಟೆ ಹಾಗೂ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷ ಸಂಘಟನೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಂತೆ ಮಾಡಲು ಹಗಲಿರುಳು ಶ್ರಮಿಸಬೇಕೆಂದರು.
ತಾಲೂಕಿನಲ್ಲಿ ನೀರಾವರಿ, ಶಿಕ್ಷಣ, ಲೋಕೋಪಯೋಗಿ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಗ್ರ ಅಭಿವೃದ್ಧಿಯಾಗುತ್ತಿದೆ ಹಾಗೂ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಜತೆಗೆ ಸರ್ವತೋಮುಖ ಅಭಿವೃದ್ಧಿ ಮಾಡುತ್ತಿರುವ ಬಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿ 2028 ಕ್ಕೆ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದರು.
ರಾಜ್ಯ ಸರ್ಕಾರದ ನೂತನ ಸಚಿವರಾಗಿ ಜಿಲ್ಲೆಗೆ ಆಗಮಿಸುತ್ತಿರುವ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ತಾಲೂಕಿನ ಗಡಿಭಾಗ ನಿಡಘಟ್ಟದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಾಸಕ ಕೆ.ಎಂ.ಉದಯ್ ನಿಡಘಟ್ಟದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಕುಂದುಕೊರತೆ ಸಭೆಯಲ್ಲಿ ತಿಳಿಸಿದರು.
ಇದೇ ವೇಳೆ ಜೆಡಿಎಸ್ ತೊರೆದು ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಎನ್.ಎಂ.ಪ್ರಕಾಶ್, ಖುದ್ದುಸ್, ಮುಖಂಡರಾದ ತೈಲೂರು ರಘು, ಹಳ್ಳಿಕೆರೆ ಎಚ್.ಎಲ್.ಸತೀಶ್, ದೊಡ್ಡತಮ್ಮಯ್ಯ, ಮಹದೇವು, ದೊರೆಸ್ವಾಮಿ, ಪ್ರಕಾಶ್, ನಿಂಗೇಗೌಡ್ರು ಸೇರಿದಂತೆ ಇನ್ನಿತರ ಹಾಜರಿದ್ದರು.