ಕಿಕ್ಕೇರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಶುಕ್ರವಾರ ಜರುಗಿದ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿದರು. ಉದಯಕುಮಾರ್, ಜಾಣೇಗೌಡ, ಚಂದ್ರಮೋಹನ್, ಕೆ.ವಿ. ಅರುಣಕುಮಾರ್ ಮತ್ತಿತರರಿದ್ದರು.
ಕಿಕ್ಕೇರಿ: ಎಸ್‌ಐಆರ್ 2026ರ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ಯಾರೊಬ್ಬ ಅರ್ಹ ಮತದಾರರೂ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರ ವಹಿಸಿ ಎಂದು ಕೆಪಿಸಿಸಿ ಸದಸ್ಯ ಸುರೇಶ್ ಹೇಳಿದರು.
ಹೋಬಳಿ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಕುಟುಂಬವೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸರ್ಕಾರದ ಸವಲತ್ತು ಪಡೆಯಲು ಮತದಾರರ ಚೀಟಿ ಅಗತ್ಯವಾಗಿದ್ದು, ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಬಂದಾಗ ಅಗತ್ಯ ದಾಖಲೆ ನೀಡಿ ನೋಂದಾಯಿಸಿಕೊಳ್ಳಿ. ಹೆಸರು ಪರಿಶೀಲನೆ, ತಿದ್ದುಪಡಿ, ಸೇರ್ಪಡೆ, ಮೃತಪಟ್ಟವರು, ಸ್ಥಳಾಂತರಗೊಂಡವರ ಮಾಹಿತಿ ನೀಡಿ ಎಂದು ತಿಳಿಸಿದರು.
ತಾಲೂಕು ಕಾಂಗ್ರೆಸ್‌ನ ಬೂತ್ ಅಧಿಕಾರಿ ಬಿಎಲ್‌ಒ 2 ಎಚ್.ಎಂ. ಉದಯಕುಮಾರ್ ಮಾತನಾಡಿ, ಹೋಬಳಿಯಲ್ಲಿನ ಪಕ್ಷದ ಕಾರ್ಯಕರ್ತರು ಮತದಾರ ಪಟ್ಟಿಯ ಪರಿಶೀಲನೆ ನಡೆಸಲು ಮುಂದಾಗಿ. ಪಕ್ಷದ ಕಾರ್ಯಕರ್ತರ ಹೆಸರು ಬಿಟ್ಟುಹೋಗದಂತೆ ಎಚ್ಚರಿಕೆವಹಿಸಿ. ಮತದಾನದ ಹಕ್ಕು ಕಳೆದುಕೊಳ್ಳುವುದರಿಂದ ಉತ್ತಮ ಸಮಾಜ, ನಾಯಕನ ಆಯ್ಕೆ ಮಾಡಲು ಕಷ್ಟವಾಗಲಿದೆ. ಕಾರ್ಯಕರ್ತರು ಜನರಲ್ಲಿ ಅರಿವು ಮೂಡಿಸಲು ಮುಂದಾಗಿ ಎಂದು ವಿನಂತಿಸಿದರು.
ಮುಖಂಡರಾದ ಚಂದ್ರಮೋಹನ್, ಜಾಣೇಗೌಡ, ಕೆ.ವಿ. ಅರುಣಕುಮಾರ್, ಮಾದಾಪುರ ರಾಮಕೃಷ್ಣೇಗೌಡ, ಆಕಾಶ್, ಲಕ್ಷ್ಮೀಪುರ ಚಂದ್ರೇಗೌಡ, ನ್ಯಾಯಬೆಲೆ ಮಂಜು ಮತ್ತಿತರರಿದ್ದರು.