ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು.
ಮದ್ದೂರು: ಸಮೀಪದ ಗೆಜ್ಜಲಗೆರೆಯ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ಕಾರು ಲಾರಿಯನ್ನು ಓವರ್ ಟೇಕ್ ಮಾಡಲು ಹೋದ ಪರಿಣಾಮ ಕಾರು ಪಲ್ಟಿಯಾಗಿ ದಂಪತಿಗೆ ತೀವ್ರಗಾಯ, ಪುತ್ರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮಡಿಕೇರಿ ಮೂಲದ ನಂದಿನೆವರಂಡ ತಿಮ್ಮಯ್ಯ ಹಾಗೂ ಅವರ ಪತ್ನಿ ಕಾವ್ಯಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಪುತ್ರ ಮೋಹಿಕ್‌ಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ತಿಮ್ಮಯ್ಯ ಅವರು ಮಡಿಕೇರಿ ಎಸ್ಪಿ ಕಚೇರಿಯಲ್ಲಿ ಉದ್ಯೋಗಿ ಎಂದು ತಿಳಿದು ಬಂದಿದೆ.
ಭಾನುವಾರ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ದಂಪತಿಗಳು ಹಾಗೂ ಪುತ್ರ ಹೋಗುತ್ತಿದ್ದ ವೇಳೆ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಕಾರು ಪಲ್ಟಿಯಾಗಿದೆ. ಪಲ್ಟಿ ರಭಸಕ್ಕೆ ಡಿವೈಡರ್ ದಾಟಿ ಮತ್ತೊಂದು ರಸ್ತೆಗೆ ಕಾರು ಉರುಳಿ ಬಿದ್ದ ಹಿನ್ನೆಲೆ ಕಾರು ಸಂಪೂರ್ಣ ನಜ್ಜು-ಗುಜ್ಜಾಗಿದೆ. ಸ್ಥಳಿಯರು ಮತ್ತು ಪೊಲೀಸರು ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿ ಗಾಯಾಗಳನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರ ಪಿಎಸ್‌ಐ ರಾಮಸ್ವಾಮಿ ಹಾಗೂ ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.