ಸಲ್ಯೂಷನ್ ಮತ್ತಿನಲ್ಲಿ ಅಪ್ರಾಪ್ತ ಬಾಲಕರು
- ಹಾಸನಕ್ಕೆ ಕರೆದೊಯ್ದ ಪೊಲೀಸರು
ಶ್ರೀರಂಗಪಟ್ಟಣ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿಗಳನ್ನು ಖಚಿತ ಮಾಹಿತಿ ಮೇರೆಗೆ ಹಾಸನ ನಗರದ ಬಡಾವಣೆ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿ ಕರೆದೊಯ್ದಿದ್ದಾರೆ.
ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಗ್ರಾಮಸ್ಥ ಶಿವಣ್ಣ ಅವರ ಪುತ್ರ ಸಂತೋಷ ಹಾಗೂ ಈತನ ಪತ್ನಿ ಸೌಮ್ಯಾ ಬಂಧಿತ ದಂಪತಿ. ಒಟ್ಟು 3ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಹಾಸನಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿಗಳ ಪ್ರಕಾರ ಸಂತೋಷ ಹಾಸನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದು ಸುಮಾರು 1ಕೆ.ಜಿ.ಯಷ್ಟು ಗಾಂಜಾವನ್ನು ವಶಪಡಿಸಿಕೊಂಡು ಬಳಿಕ ನಿರಂತರ ಪರಿಶೀಲನೆ ಮೂಲಕ ಶ್ರೀರಂಗಪಟ್ಟಣದಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಈ ಮಾಹಿತಿ ದೊರೆತ ತಕ್ಷಣ ಶ್ರೀರಂಗಪಟ್ಟಣ ಟೌನ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ಸಿಬ್ಬಂದಿ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸಲ್ಯೂಷನ್ ಮತ್ತಿನಲ್ಲಿ ಅಪ್ರಾಪ್ತ ಬಾಲಕರು : ಪಟ್ಟಣ ಸಮೀಪದ ಗಂಜಾಂನಲ್ಲಿ ಅಪ್ರಾಪ್ತ ಬಾಲಕರು ಸೆಲ್ಯೂಷನ್ ನಶೆಗೆ ಸಿಲುಕಿ ಅಮಲಿನ ತೇಲಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗಂಜಾಂನ ಮೊಹಮದ್ ಷಾ ಬಡಾವಣೆಯ ಮನೆಯೊಂದರಲ್ಲಿ ಅಪ್ರಾಪ್ತ ಬಾಲಕರು ಮೈ ಮೇಲೆ ಪ್ರಜ್ಞೆ ಇಲ್ಲದೆ ವೈಟ್ನರ್ ಹಾಗೂ ಫೆವಿಕಾಲ್‌ನ ಸಲ್ಯೂಷನ್ ಸೇವಿಸಿ ಮತ್ತಿನಲ್ಲಿ ತೇಲಾಡುತ್ತಿದ್ದ ದೃಶ್ಯ ಕಂಡುಬಂದಿದೆ.