ಕಿಕ್ಕೇರಿ ಹೋಬಳಿ ದಬ್ಬೇಘಟ್ಟ ವ್ಯಾಪ್ತಿಯಲ್ಲಿ ಮೋಟಾರ್‌ಗಳ ತಾಮ್ರದ ತಂತಿಯನ್ನು ಕಳವು ಮಾಡುತ್ತಿರುವ ಆರೋಪಿಗಳನ್ನು ಬಂಧಿಸುವಂತೆ ರೈತರು ಆಗ್ರಹಿಸಿದರು. ಮಂಜೇಗೌಡ, ಪುಟ್ಟೇಗೌಡ, ಬಾಲು, ಸೋಮೇಗೌಡ ಇತರರು ಇದ್ದರು.
- ಕಳ್ಳರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ರೈತರ ಆಗ್ರಹ
ಕಿಕ್ಕೇರಿ: ದಬ್ಬೇಘಟ್ಟ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳ ಮೋಟಾರ್ ಪಂಪ್, ಇದರಲ್ಲಿನ ಕಾಪರ್ ವೈರ್‌ಗಳ ಕಳವು ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದರು.
ಕಳೆದ ವರ್ಷದಿಂದ 15ಕ್ಕೂ ಹೆಚ್ಚು ರೈತರ ಮೋಟಾರ್ ಪಂಪ್, ಇದರಲ್ಲಿನ ಕಾಪರ್ ವೈರ್‌ಗಳನ್ನು ಕಳ್ಳರು ಕಳವು ಮಾಡುತ್ತಿರುವುದರಿಂದ ಜಮೀನುಗಳಿಗೆ ಒಂಟಿಯಾಗಿ ರಾತ್ರಿ ವೇಳೆ ತೆರಳುವುದೇ ಕಷ್ಟವಾಗಿದೆ. ಬಹುತೇಕ ಕಬ್ಬು, ತೆಂಗು ಇರುವ ಪ್ರದೇಶವಾಗಿದ್ದು ಕಳವು ಮಾಡಿಕೊಂಡು ಸುಲಭವಾಗಿ ಕಳ್ಳರು ಪರಾರಿಯಾಗುತ್ತಿದ್ದಾರೆ ಎಂದು ರೈತ ಮುಖಂಡ ಮಂಜೇಗೌಡ ಆರೋಪಿಸಿದರು.
ಬುಧವಾರ ರಾತ್ರಿ ದಬ್ಬೇಘಟ್ಟ ಗ್ರಾಮದ ರೈತರಾದ ರಾಮು, ಪ್ರಶಾಂತ್, ಮಂಜು, ಮಹೇಂದ್ರ ಜಮೀನಿನಲ್ಲಿದ್ದ ಮೋಟರ್‌ಗಳನ್ನು ಬಿಚ್ಚಿ ಇದರಲ್ಲಿದ್ದ ಕಾಫರ್(ತಾಮ್ರ)ದ ತಂತಿ ಬಿಚ್ಚಿಕೊಂಡು ಹೋಗಿದ್ದಾರೆ ಎಂದು ದೂರಿದರು.
ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಹಿಂದೆ ಕಳವು ಆಗಿರುವ ಪ್ರಕರಣಗಳು ಇದುವರೆವಿಗೂ ಪತ್ತೆಯಾಗಿಲ್ಲ. ಹೀಗಾಗಿ ನಿರ್ಭಯವಾಗಿ ಕಳ್ಳರು ಕಳವು ಮಾಡುತ್ತಿದ್ದಾರೆ. ಪೊಲೀಸರು ಕಳ್ಳರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ರೈತರಾದ ಪುಟ್ಟೇಗೌಡ, ಮಂಜೇಗೌಡ, ಬಾಲು, ಸೋಮೇಗೌಡ, ಅಶೋಕ, ಮಣಿಯಮ್ಮ, ನಂಜುಂಡ, ಮನು, ರಾಮು, ರಾಜಣ್ಣ ಮತ್ತಿತರರು ಇದ್ದರು.