ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಹರೀಶ್‌ಬಾಬು, ಪಿ.ಸಂದರ್ಶ, ಕದಲೂರು ರಾಮಕೃಷ್ಣ, ತಿಮ್ಮೇಗೌಡ, ಕೆ.ಎಂ.ರವಿ. ನಿಡಘಟ್ಟ ಪ್ರಕಾಶ್ ಇದ್ದರು.
- ಶಾಸಕ ಕೆ.ಎಂ.ಉದಯ್ ಹೇಳಿಕೆ
- ಕದಲೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಮದ್ದೂರು: ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ಕದಲೂರು ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ನಗರದ ತೋಟಗಾರಿಕೆ ಇಲಾಖೆ ಸ್ಥಳದಲ್ಲಿ ನೂತನ ರೈಲು ನಿಲ್ದಾಣ ಮಾಡುವುದಾಗಿ ರೈಲ್ವೆ ಸಚಿವ ವಿ.ಸೋಮಣ್ಣ ಗುರುವಾರ ಮದ್ದೂರು ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ವೇಳೆ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿ ಮಾಡಿದರೆ ಸೂಕ್ತ ಸಹಕಾರ ನೀಡಲಾಗುವುದು. ಯಾರೇ ಬಂದು ಅಭಿವೃದ್ಧಿ
ಕೆಲಸ ಮಾಡಿದರೂ ಅವರಿಗೂ ಸ್ವಾಗತ ಕೋರುತ್ತೇನೆ ಎಂದು ತಿಳಿಸಿದರು.
ಈಗಾಗಲೇ ಶಿವಪುರದ ರೈಲು ನಿಲ್ದಾಣಕ್ಕೆ 100 ವರ್ಷವಾಗಿದ್ದು, ಹೀಗಾಗಿ ತೋಟಗಾರಿಕೆ ಸ್ಥಳದಲ್ಲಿ ರೈಲು ನಿಲ್ದಾಣ ಮಾಡಿದರೆ ಆಧುನೀಕರಣ ಜತೆಗೆ ಸಾರ್ವಜನಿಕರಿಗೂ ಸಾಕಷ್ಟು ಉಪಯೋಗವಾಗುತ್ತದೆ. ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಅನುದಾನ ಮತ್ತು ರಾಜ್ಯ ಸರ್ಕಾರದ ಮಾತ್ರ ಸಾಧ್ಯವಾಗುವುದಿಲ್ಲ. ಇದರಲ್ಲಿ ಕೇಂದ್ರ ಸರ್ಕಾರ ಹಾಗೂ ಸಿಎಸ್‌ಆರ್ ಅನುದಾನವು ಬೇಕಾಗುತ್ತದೆ. ಹೀಗಾಗಿ ಯಾರೇ ಬಂದು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಿದರೆ ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈಗಾಗಲೇ ರೈಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ನಿಡಘಟ್ಟ, ಸೋಮನಹಳ್ಳಿ, ಬಸ್ ಡಿಪೋ ರಸ್ತೆ, ಹಾಗೂ ಚನ್ನೆಗೌಡನದೊಡ್ಡಿ ಬಳಿ ಅಂಡರ್‌ಪಾಸ್ ಅಥವಾ ಮೇಲು ಸೇತುವೆ ನಿರ್ಮಾಣ ಮಾಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಸಚಿವರೂ ಭರವಸೆ ನೀಡಿದ್ದಾರೆ ಎಂದರು.
ತಾಲೂಕಿನ ಕದಲೂರು ಗ್ರಾಮವನ್ನು ರಾಜ್ಯದಲ್ಲಿಯೇ ಮಾದರಿ ಗ್ರಾಮವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮದ ರಸ್ತೆಗಳು ಸಾಕಷ್ಟು ಕಿರಿದಾಗಿದ್ದವು ಒತ್ತುವರಿ ತೆರವು ಮಾಡಿ ವಿಸ್ತರಣೆ ಮಾಡಲಾಗಿದೆ. ಜತೆಗೆ ಮನೆ ಮನೆಗೆ ಶುದ್ಧ ಕುಡಿಯುವ ನೀರು, ಕೆರೆಯ ಹೂಳು ತೆಗೆದು ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಸುಂದರವಾಗಿ ಕಾಣುವಂತೆ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಸರ್ಕಾರಿ ಜಾಗದಲ್ಲಿ ಉದ್ಯಾನ, ನಾಲೆಗಳ ಅಭಿವೃದ್ಧಿ, ಡಿಜಿಟಲ್ ಗ್ರಂಥಾಲಯ, ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವುದು, ಸರ್ಕಾರಿ ಶಾಲೆ ಉನ್ನತೀಕರಣ ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದರು.
ಜತೆಗೆ ಗ್ರಾಮದ ಶ್ರೀ ಪಟ್ಟಲದಮ್ಮ ದೇವಾಲಯವನ್ನು ಅಂದಾಜು 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಈಗಾಗಲೇ ಕಲ್ಲಿನ ಕೆತ್ತನೆ ಕೆಲಸ ಕೂಡ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಬಳಿಕ ಹಳೆಯ ದೇವಾಲಯವನ್ನು ತೆರವು ಮಾಡಿ ನೂತನ ದೇವಾಲಯ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಕೆ.ಎಂ.ರವಿ, ನಿಡಘಟ್ಟ ಪ್ರಕಾಶ್, ಲೋಕೇಶ್, ರವಿ, ಚಂದ್ರ, ಭೈರವ, ಸಂಜಯ್, ರಮೇಶ್, ಸಿದ್ದಲಿಂಗ, ಪುಟ್ಟರಾಮು, ಚಂದ್ರಶೇಖರ, ರಘು, ಎಇಇ ದೇವಾನಂದ್ ಇತರರು ಇದ್ದರು.