ಕಿಕ್ಕೇರಿ ಸಮೀಪದ ಪುರಗೇಟ್ ಮಹದೇಶ್ವರಬೆಟ್ಟದಲ್ಲಿ ಆಯೋಜಿಸಿದ್ದ ಬೆಳದಿಂಗಳ ಕಾರ್ಯಕ್ರಮದಲ್ಲಿ ರುದ್ರಹೋಮ ನಡೆಯಿತು. ಶಾಸಕ ಎಚ್.ಟಿ.ಮಂಜು, ಆರ್‌ಟಿಒ ಮಲ್ಲಿಕಾರ್ಜುನ್, ಬಸಪ್ಪ ಗುರೂಜೀ, ಸುಜೇಂದ್ರಕುಮಾರ್ ಮತ್ತಿತರರಿದ್ದರು.  
ಮಂಡ್ಯ

ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿಗೆ ಅಗತ್ಯ ಸಹಕಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಟಿ.ಮಂಜು
  • ಪುರದ ಶ್ರೀ ಕ್ಷೇತ್ರ ಮಲೆಮಹದೇಶ್ವರಸ್ವಾಮಿ ಬೆಟ್ಟ
  • ದೇಗುಲದ ಪ್ರಧಾನ ವ್ಯವಸ್ಥಾಪಕ ಅರ್ಚಕ ಬಸಪ್ಪ ಗುರೂಜಿ
ಕಿಕ್ಕೇರಿ: ಕತ್ತಲಿನ ಅಂಧಕಾರದಿಂದ ಸುಜ್ಞಾನದ ಬೆಳಕಿಗೆ ಸಾಗಲು ನಿರ್ಮಲ ಮನಸ್ಸು ಅತ್ಯಗತ್ಯ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಸಮೀಪದ ಪುರದ ಶ್ರೀ ಕ್ಷೇತ್ರ ಮಲೆಮಹದೇಶ್ವರಸ್ವಾಮಿ ಬೆಟ್ಟದಲ್ಲಿ ದೇಗುಲದ ಪ್ರಧಾನ ವ್ಯವಸ್ಥಾಪಕ ಅರ್ಚಕ ಬಸಪ್ಪ ಗುರೂಜಿ ಸಾನ್ನಿಧ್ಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 11ನೇ ವರ್ಷದ ಬೆಳದಿಂಗಳ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಕ್ಷೇತ್ರ ಅರಣ್ಯ ವ್ಯಾಪ್ತಿಗೆ ಬರುವುದರಿಂದ ಅಭಿವೃದ್ಧಿಪಡಿಸಲು ಹಲವು ಕಾನೂನು ತೊಡಕುಗಳಿವೆ. ಶಕ್ತಿಮೀರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲು ಸಹಕರಿಸುವೆ ಎಂದರು.
ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಮಾತನಾಡಿ, ಮಲೆಮಹದೇಶ್ವರರ ದರ್ಶನಕ್ಕೆ ಚಾಮರಾಜನಗರದ ತಾಳಬೆಟ್ಟಕ್ಕೆ ಹೋಗಬೇಕಿತ್ತು. ಇಂದು ಬಸಪ್ಪ ಗುರೂಜಿ ಶ್ರಮದಿಂದ ತಾಲೂಕಿನಲ್ಲಿಯೇ ಶ್ರೀಗಳ ದರ್ಶನ ಸಿಗುವಂತಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಪವಾಡಗಳು ನಡೆದಿದೆ ಎಂದು ನುಡಿದರು.
ದೇಗುಲದಲ್ಲಿ ಸುಪ್ರಭಾತ ಸೇವೆ, ರುದ್ರ ಹೋಮ, ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ ಅನ್ನದಾಸೋಹ ಏರ್ಪಡಿಸಲಾಗಿತ್ತು. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ರೈತ ವಿಜ್ಞಾನಿ ರೋಬೋ ಮಂಜೇಗೌಡ, ಮುಖಂಡರಾದ ರವೀಂದ್ರಬಾಬು, ಮಾದಾಪುರ ರಾಮಕೃಷ್ಣೇಗೌಡ, ಕೆ.ಆರ್. ನೀಲಕಂಠ, ಪ್ರೇಮಕುಮಾರಿ, ನಳಿನಿ, ಪ್ರಕಾಶ್, ಮೈತ್ರಿ ಡಾಬಾ ಕೋಮನಹಳ್ಳಿ ಮಂಜು, ರವಿ, ಅರ್ಚಕ ರಾಜಣ್ಣ, ರಾಮೇಗೌಡ, ಚಂದ್ರೇಗೌಡ, ವಾಟಾಳ್ ನಾಗರಾಜು, ದೇವರಾಜು, ಎಂ.ಕೆ ಯೋಗೇಶ್, ಗಂಜಿಗೆರೆ ಮಹೇಶ್, ಮಾಕವಳ್ಳಿ ಕುಮಾರಸ್ವಾಮಿ, ಬಸವರಾಜು ಮತ್ತಿತರರಿದ್ದರು.