ಕಿಕ್ಕೇರಿ ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿ ಬುಧವಾರ ತಾಲೂಕು ವಿವಿಧೋದ್ದೇಶ ಗ್ರಾಮೀಣಾಭಿವೃದ್ಧಿ ಅಲೆಮಾರಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಸವರಾಜು, ಉಪಾಧ್ಯಕ್ಷರಾಗಿ ಶಿವಣ್ಣ ಅವಿರೋಧವಾಗಿ ಆಯ್ಕೆಯಾದರು. ನಾರಾಯಣಸ್ವಾಮಿ, ಚಲುವಯ್ಯ, ಸಿಡಿಒ ಭರತ್‌ಕುಮಾರ್, ನಿರ್ದೇಶಕರು ಇದ್ದರು.  
ಮಂಡ್ಯ

ಅಲೆಮಾರಿ ಸಮುದಾಯದ ಆರ್ಥಿಕ ಸ್ವಾವಲಮಬನೆಗೆ ಸಹಕಾರ ಅಗತ್ಯ

ಕಿಕ್ಕೇರಿ: ಸಮಾಜದಲ್ಲಿ ಹಿಂದುಳಿದಿರುವ ಸಮುದಾಯಗಳಲ್ಲಿ ಅಲೆಮಾರಿ ಸಮುದಾಯವೂ ಒಂದಾಗಿದ್ದು, ಇದರ ಸಂಘಟನೆ, ಆರ್ಥಿಕ ಸ್ವಾವಲಂಬನೆಗೆ ಎಲ್ಲರ ಸಹಕಾರ ಅವಶ್ಯ ಎಂದು ತಾಲೂಕು ವಿವಿಧೋದ್ದೇಶ ಗ್ರಾಮೀಣಾಭಿವೃದ್ಧಿ ಅಲೆಮಾರಿ ಸಹಕಾರ ಸಂಘದ ಅಧ್ಯಕ್ಷ ಬಸವರಾಜು ತಿಳಿಸಿದರು.
ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ವಿವಿಧೋದ್ದೇಶ ಗ್ರಾಮೀಣಾಭಿವೃದ್ಧಿ ಅಲೆಮಾರಿ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿ, ಬಹಳ ವರ್ಷದಿಂದ ಸಂಘ ಚಟುವಟಿಕೆ ಕಾಣದೆ ನಿರ್ಲಿಪ್ತತೆ ಕಾಡುತ್ತಿತ್ತು. ಅಲೆಮಾರಿ ಸಮುದಾಯದ ಸಮಸ್ಯೆ ಕೇಳಲು, ಪರಿಹಾರ ಕಾಣಲು ಪರಿತಪಿಸಬೇಕಿತ್ತು. ಸರ್ಕಾರದಿಂದ ಸವಲತ್ತು ಪಡೆಯಲು ಕಷ್ಟವಾಗಿತ್ತು. ಇನ್ನಾದರೂ ಸಂಘದಡಿಯಲ್ಲಿ ಎಲ್ಲರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸೋಣ ಎಂದರು.
ಸಂಘದಲ್ಲಿ 230 ಷೇರುದಾರರಿದ್ದು, ಪ್ರತಿ ಷೇರಿಗೆ 1200 ರೂ. ನಿಗದಿಪಡಿಸಲಾಗಿದೆ. ಸರ್ಕಾರದಿಂದ ಅನುಸೂಚಿತ ವರ್ಗ, ಪಂಗಡಕ್ಕೆ ಷೇರು ಸಹಾಯಧನ ಹಣವನ್ನು ಒದಗಿಸಿಕೊಡಲು ಒತ್ತಾಯ ಮಾಡಬೇಕಿದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಶಿಕ್ಷಣವೇ ನಮ್ಮ ಸಮುದಾಯಕ್ಕೆ ಬಲು ದೊಡ್ಡ ಅಸ್ತ್ರವಾಗಬೇಕು ಎಂದು ವಿನಂತಿಸಿದರು.
ರೈತ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ಬಳೆ, ಮಿಕ್ಸಿಯಂತಹ ವಸ್ತುಗಳನ್ನು ಊರೂರು ಅಲೆಯುತ್ತ ಮಾರಾಟ ಮಾಡುವ ಸಮುದಾಯಕ್ಕೆ ಒಂದು ನೆಲೆ ಬೇಕಿದೆ. ಸಂಘದ ಮೂಲಕ ಗುಡಿ ಕೈಗಾರಿಕೆ ನಿರ್ಮಿಸಿ. ಒಂದೆಡೆ ಸ್ಥಿರವಾಗಿ ನಿಂತು ಆರ್ಥಿಕ ಸ್ವಾವಲಂಬಿಗಳಾಗಲು ಸಂಘದ ಮೂಲಕ ಶ್ರಮಿಸಿ ಎಂದು ಹಲವು ಉಪಯುಕ್ತ ಮಾಹಿತಿ ನೀಡಿದರು.
ಉಪಾಧ್ಯಕ್ಷರಾಗಿ ಶಿವಣ್ಣ ಆಯ್ಕೆಯಾದರು. ಚಲುವಯ್ಯ, ಸಿಡಿಒ ಭರತ್‌ಕುಮಾರ್, ನಿರ್ದೇಶಕರಾದ ಹನುಮಂತು, ರಾಮು, ಸೋಮಶೇಖರ, ರಂಗಣ್ಣ, ಬಾಲಕೃಷ್ಣ, ವೆಂಕಟೇಶ್, ದೇವರಾಜು, ಯಶೋದಮ್ಮ, ಗೌರಮ್ಮ ಮತ್ತಿತರರಿದ್ದರು.