ಮಂಡ್ಯ ನಗರದ ಸರ್ ಎಂ.ವಿ.ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. 
ಮಂಡ್ಯ

ಶ್ರೀಪುರುಷನ ಹೆಸರಿನಲ್ಲಿ ಕನ್ನಡ ಭವನ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ಭವನ ನಿರ್ಮಾಣ
  • ಸುಸಜ್ಜಿತ ಕಟ್ಟಡಕ್ಕೆ 5.50 ಕೋಟಿ ರೂ ವೆಚ್ಚ
  • ಚುಂಚಶ್ರೀ ಸಮ್ಮುಖದಲ್ಲಿ ಶಂಕುಸ್ಥಾಪನೆ
ಮಂಡ್ಯ: ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ಈ ಹಿನ್ನೆಲೆಯಲ್ಲಿ ಆ ಸವಿನೆನಪಿಗಾಗಿ 5.50 ಕೋಟಿ ರೂ ವೆಚ್ಚದಲ್ಲಿ ಕನ್ನಡ ನಾಡನ್ನು ಆಳಿದ ಗಂಗ ರಾಜವಂಶದ ದೊರೆ ಶ್ರೀಪುರುಷನ ಹೆಸರಿನಲ್ಲಿ ಮುಂದಿನ ಒಂದು ವರ್ಷದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಸರ್ ಎಂ.ವಿ.ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಕಲೆ, ಸಾಹಿತ್ಯ, ಕೃಷಿ ಮತ್ತು ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಬಿ.ಎಂ.ಶ್ರೀಕಂಠಯ್ಯ, ಪು.ತಿ.ನ, ಕೆ.ಎಸ್.ನರಸಿಂಹಸ್ವಾಮಿ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ. ಶ್ರೀಮಂತಗೊಂಡಿರುವ ಭಾಷೆಯ ಮತ್ತಷ್ಟು ಬಲವರ್ಧನೆಗೆ ಕನ್ನಡ ಭವನ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸುತ್ತೇನೆ. ಆದಿಚುಂಚನಗಿರಿ ಶ್ರೀಗಳು ಬಹಳ ಕಾಳಜಿ ಹಾಗೂ ಶ್ರದ್ಧೆ ವಹಿಸಿ ಸಮ್ಮೇಳನ ಯಶಸ್ವಿ ಮತ್ತು ಭವನ ನಿರ್ಮಾಣದ ಅಡಿಗಲ್ಲು ಸ್ಥಾಪನೆಗೆ ನಮ್ಮೊಟ್ಟಿಗೆ ಶ್ರಮಿಸಿದ್ದಾರೆ. ಅವರಿಗೆ ಭಕ್ತಪೂರ್ವಕ ನಮನ ಸಲ್ಲಿಸುತ್ತೇನೆ. ಮಂಡ್ಯ ಜಿಲ್ಲೆಯವರೆಂದು ಹೇಳಿಕೊಳ್ಳಲು ನಮಗೆ ತೃಪ್ತಿ ಹಾಗೂ ಸಂತಸ ವ್ಯಕ್ತವಾಗುತ್ತದೆ ಎಂದು ತಿಳಿಸಿದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ದೇಶ-ವಿದೇಶಗಳ ಕನ್ನಡಿಗರ ಸಾಕ್ಷಿ ಪ್ರಜ್ಞೆಯಾಗಿ ಜರುಗಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಕನ್ನಡ ಭವನ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ಪೌರಾಯುಕ್ತೆ ಯು.ಪಿ.ಪಂಪಾಶ್ರೀ, ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ರುದ್ರಪ್ಪ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಇತರರಿದ್ದರು.

ಇತಿಹಾಸ ನಿರ್ಮಿಸಿದ್ದ ಸಮ್ಮೇಳನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ, 10 ಲಕ್ಷ ಜನರ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದು ಇತಿಹಾಸ ನಿರ್ಮಿಸಿದೆ. ಆ ನೆನಪಿನ ಹೆಜ್ಜೆ ಗುರುತಿಗೆ ಬೃಹತ್ ಕನ್ನಡ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡುವ ಉತ್ತಮ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ 10 ಸಾವಿರ ಕೋಟಿ ರೂ ಅನುದಾನ ಬಳಕೆಯಾಗುತ್ತಿದೆ. ಅದರ ಲೆಕ್ಕ ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ರಾಜಕೀಯ ಎದುರಾಳಿಗಳು ನಮ್ಮನ್ನು ಪ್ರಶ್ನಿಸುವ ಬದಲು ತಮ್ಮ ಕಾಣಿಕೆ ಏನೆಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ವಾಲಿಬಾಲ್ ಆಟಗಾರರಿಗೆ ಅಗತ್ಯವಿರುವ ಸುಸಜ್ಜಿತ ಸಿಂಥೆಟಿಕ್ ಕೋಟ್ ನಿರ್ಮಾಣಕ್ಕೆ 70 ಲಕ್ಷ ರೂ ಅನುದಾನ ಬಳಕೆ ಮಾಡಲಾಗುವುದು. 3.5 ಕೋಟಿ ರೂ ವೆಚ್ಚದಲ್ಲಿ ಬ್ಯಾಸ್ಕೆಟ್ ಬಾಲ್ ಅಂಕಣವೂ ನಿರ್ಮಾಣವಾಗಲಿದೆ. ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಲಿದ್ದೇವೆ. ಅದೇ ರೀತಿ ಮಂಡ್ಯ ನಗರದ ವಿವಿಧ ಅಭಿವೃದ್ಧಿಗೆ 100 ಕೋಟಿ ರೂ ವಿಶೇಷ ಅನುದಾನ ವಿನಿಯೋಗವಾಗಲಿದ್ದು, ಮುಂದಿನ ಎರಡೂವರೆ ವರ್ಷಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆರಂಭವಾಗಲಿದೆ ಎಂದರು.
ಜಿಲ್ಲೆಯ ಸಂಸದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೈಗಾರಿಕೆ ಸ್ಥಾಪನೆ ಬಗ್ಗೆ ಬರೀ ಮಾತನಾಡುತ್ತಿದ್ದಾರೆ. ಯಾವುದೇ ಕಾರ್ಖಾನೆ ತರಲು ಅವರಿಂದ ಸಾಧ್ಯವಾಗಿಲ್ಲ. ನಾವು ನುಡಿದಂತೆ ನಡೆಯಲು ಮುಂದಿನ ಒಂದು ತಿಂಗಳಲ್ಲಿ ಮಂಡ್ಯ ನಗರಕ್ಕೆ ಸಾಫ್ಟ್‌ವೇರ್ ಕಾರ್ಯಾರಂಭ ಮಾಡಲಿದ್ದೇವೆ ಎಂದು ಶಾಸಕರು ತಿಳಿಸಿದರು.

ಶ್ರೀಪುರುಷನ ಹೆಸರಿಟ್ಟಿರುವುದು ಶ್ಲಾಘನೀಯ

ಸಾನಿಧ್ಯ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಏಳನೇ ಶತಮಾನದಲ್ಲಿ ಗಂಗ ಸಾಮ್ರಾಜ್ಯವನ್ನು ಕಟ್ಟಿ ಸುಮಾರು 62 ವರ್ಷ ಆಳ್ವಿಕೆ ನಡೆಸಿದ ಶ್ರೀಪುರುಷನು ಪಶ್ಚಿಮ ಗಂಗ ರಾಜವಂಶದ ರಾಜನಾಗಿದ್ದನು. ನಾಡು-ನುಡಿಗಾಗಿ ಹೋರಾಟ ನಡೆಸಿದ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಕನ್ನಡ ಭವನ ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬಹಳ ಸುವ್ಯವಸ್ಥೆಯಾಗಿ ನಡೆದು, ನಾಡು, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಯಿತು. ಅಂತಹ ಸಮ್ಮೇಳನ ಅಚ್ಚಳಿಯದೆ ಉಳಿಯಲೆಂದು ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದು ಎಲ್ಲರ ಸಹಕಾರದಿಂದ ಸಾಧ್ಯವಾಯಿತು. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಒಬ್ಬ ವ್ಯಕ್ತಿಗೆ ಭೌತಿಕ ಕೋಶ, ಅನ್ನಮಯ ಕೋಶ, ಪ್ರಾಣಮಯ ಕೋಶ, ವಿಜ್ಞಾನಮಯ ಮತ್ತು ಮನೋಮಯ ಕೋಶಗಳಿವೆ. ಇವೆಲ್ಲವನ್ನೂ ಹೊಂದಿರುವ ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಸಾಧನೆ ಮಾಡಬೇಕು. ಅನ್ನಮಯ ಕೋಶದಂತಿರುವ ಭವನ ನಿರ್ಮಾಣ ಮಾಡಲು ಚಾಲನೆ ನೀಡಿರುವು ಶ್ಲಾಘನೀಯ ಎಂದರು.