ಮದ್ದೂರಿನಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿದರು. ಪರಶುರಾಮ್‌ಸತ್ತಿಗೇರಿ, ರಾಮಲಿಂಗಯ್ಯ, ಧನಂಜಯ, ನಾಗರಾಜು, ಸುರೇಶ್‌ಗೌತಮ್ ಇದ್ದರು. 
ಮಂಡ್ಯ

ಭಾರತದ ಸಂವಿಧಾನ ಜಗತ್ತಿನಲ್ಲೇ ವಿಶಿಷ್ಠ ಸ್ಥಾನ ಪಡೆದಿದೆ

ಮದ್ದೂರು: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಠ ಸ್ಥಾನ ಪಡೆದಿದ್ದು, ಹಲವು ದಾಖಲೆಗಳಿಗೆ ಪಾತ್ರವಾಗಿದೆ ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದಂತಹ ನೂರಾರು ಜಾತಿ, ಹತ್ತಾರು ಧರ್ಮ, ವೈವಿಧ್ಯಮಯವಾದ ಸಂಸ್ಕೃತಿ, ಆಚರಣೆಗಳಿಂದ ಕೂಡಿರುವ ದೇಶಕ್ಕೆ ಸಂವಿಧಾನವನ್ನು ರೂಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದರೆ, ಅದಕ್ಕೆ ಕಾರಣ, ನಮ್ಮ ಸಶಕ್ತವಾದ ಸಂವಿಧಾನ. ಅದು ದೇಶದ ಆಡಳಿತ ಮತ್ತು ಜನರ ಚಿಂತನೆಯ ಚಾಲಕಶಕ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಸ್ಥಾನದ ಆವರಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದ ವರೆಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ರಾಷ್ಟ್ರ ಧ್ವಜಗಳ ಹಾಗೂ ಸಂವಿಧಾನ ಪುಸ್ತಕಗಳೊಂದಿಗೆ ಪ್ರದರ್ಶನದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ಅಂಬೇಡ್ಕರ್ ಭವನಕ್ಕೆ ಆಗಮಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ದೇವಾಂಗ ಸಂಘ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್‌ಗೌತಮ್ ಅವರು ಸಂವಿಧಾನ ದಿನಾಚರಣೆಯ ಕುರಿತು ಮುಖ್ಯ ಭಾಷಣ ಮಾಡಿದರು.
ತಾಪಂ ಇಒ ರಾಮಲಿಂಗಯ್ಯ, ಬಿಇಒ ಎಸ್.ಪಿ.ಧನಂಜಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ನಾಗರಾಜು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಇತರರು ಇದ್ದರು.