ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮದ್ದೂರು - ಮಳವಳ್ಳಿ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬೋರಾಪುರ ಶಂಕರೇಗೌಡ, ವಿನೋದ್ ಬಾಬು ಇತರರು ಇದ್ದರು.
ಕೆ.ಎಂ.ದೊಡ್ಡಿ: ಪ್ರಸಕ್ತ ಸಾಲಿನಲ್ಲಿ ಕಾವೇರಿ ಜಲಾನಯನ ಪ್ರದೇಶವನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿ ಎನ್‌ಡಿಆರ್‌ಎಫ್ ಹಾಗೂ ಬಿಡಿಆರ್‌ಎಫ್ ನಡಿ ಪ್ರತಿ ಎಕರೆಗೆ 50 ಸಾವಿರ ರೂ. ಘೋಷಣೆ ಮಾಡಬೇಕು ಎಂದು ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಬೋರಾಪುರದ ಶಂಕರೇಗೌಡ ಒತ್ತಾಯಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಮದ್ದೂರು - ಮಳವಳ್ಳಿ ಹೆದ್ದಾರಿಯ ವಿಶ್ವೇಶ್ವರಯ್ಯ ವೃತ್ತದ ಬಳಿ ಶುಕ್ರವಾರ ರಸ್ತೆ ತಡೆದು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸರ್ಕಾರ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನು ಧಿಕ್ಕರಿಸಬೇಕು. ರಾಜ್ಯದಲ್ಲಿ ಪ್ರಸ್ತುತ ಬರಗಾಲ ಪರಿಸ್ಥಿತಿ ಎದುರಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ವಿನೋದ್ ಬಾಬು ಮಾತನಾಡಿ, ಹೊಸದಾಗಿ ಬೆಳೆ ಬೆಳೆಯಲು ನೀರಿಲ್ಲ. ಇರುವ ಬೆಳೆಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಬೋರ್ ವೆಲ್‌ಗಳು ಬತ್ತಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ ಎಂದರು. ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪಾಜಿ, ಉಪಾಧ್ಯಕ್ಷ ಶಂಕರ್, ಖಜಾಂಚಿ ಶೆಟ್ಟಹಳ್ಳಿ ರವಿಕುಮಾರ್, ರಾಮೇಗೌಡ, ದಯಾನಂದ, ಸಿದ್ದರಾಜು, ರಮೇಶ ಇತರರು ಇದ್ದರು.