ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಯುವ ನಾಯಕಿ ಕುಸುಮಾ ಮಾತನಾಡಿದರು.
ಮಂಡ್ಯ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲಿಗೆ ಕಾಂಗ್ರೆಸ್ ಕಾರಣವೆಂದು ಬಿಜೆಪಿ ನಾಯಕರು ಸುಳ್ಳಿನ ಮಾಹಿತಿ ನೀಡುತ್ತಿದ್ದಾರೆಂದು ಕಾಂಗ್ರೆಸ್ ಯುವ ನಾಯಕಿ ಕುಸುಮಾ ಹನುಮಂತರಾಯಪ್ಪ ಆರೋಪಿಸಿದರು.
ಮಹಿಳೆಯರಿಗೆ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸ್ವಾತಂತ್ರ್ಯ ದೊರೆಯುತ್ತಿರುವುದು ಕಾಂಗ್ರೆಸ್ ಪಕ್ಷದ ಕೊಡುಗೆ. ಲೋಕಸಭಾ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿಗೂ ಹೆಚ್ಚಾಗಿ ಕ್ಷೇತ್ರ ವಿಂಗಡಣೆಯ ಉದ್ದೇಶವಿತ್ತು. ಮೀಸಲಾತಿ ಜತೆಗೆ ಕ್ಷೇತ್ರವಾರು ವಿಂಗಡಣೆಗೆ ವಿರೋಧ ವ್ಯಕ್ತವಾಗಿ ಮಸೂದೆ ಜಾರಿ ವಿಫಲವಾಯಿತು. ಆದರೆ ಕಾಂಗ್ರೆಸ್ ಪಕ್ಷ ಮಹಿಳೆಯರ ವಿರೋಧವಿದೆ ಎಂಬ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
2023ರಲ್ಲೇ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ಎಲ್ಲ ಪಕ್ಷಗಳು ಸಹಕಾರ ನೀಡಿದ್ದವು. ಆದರೆ ಎನ್‌ಡಿಎ ಸರಕಾರವು 2026ರ ನಂತರ ಜನಗಣತಿ ಹಾಗೂ ಕ್ಷೇತ್ರವಾರು ವಿಂಗಡಣೆಯಾಗಿ ನಂತರ ಮಹಿಳಾ ಮೀಸಲಾತಿ ಜಾರಿ ಮಾಡುವುದಾಗಿ ಮುಂದೂಡಿದ್ದರು. ಆದರೆ ಈಗ ತರಾತುರಿಯಲ್ಲಿ, ದುರುದ್ದೇಶದಿಂದ 2011ರ ಜನಗಣತಿಯಂತೆ ಬಿಲ್ ಜಾರಿ ಮಾಡುವುದಾಗಿ ಹೇಳಿ ಕ್ಷೇತ್ರವಾರು ವಿಂಗಡಣೆಗೆ ಮುಂದಾಗಿದೆ. 2016ರಿಂದಲೂ ಎನ್‌ಡಿಎ ಅಧಿಕಾದಲ್ಲಿದ್ದು, ಮಹಿಳೆಯರ ಪರ ಕಾಳಜಿಯಿದ್ದರೆ 543 ಕ್ಷೇತ್ರಗಳಲ್ಲೇ ಮಹಿಳಾ ಮೀಸಲಾತಿ ತರಬಹುದಿತ್ತು ಎಂದರು.
ಮಹಿಳಾ ಮೀಸಲಾತಿ ಬಿಲ್ ವಿಫಲವಾಗಲಿದೆ ಎಂಬುದು ಬಿಜೆಪಿ ಮೊದಲೇ ಗೊತ್ತಿತ್ತು. ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹಲವೆಡೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಎಂದು ಬಿಂಬಿಸಿ ಚುನಾವಣೆ ಗೆಲ್ಲಲು ಮಹಿಳೆಯರನ್ನ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಮೊದಲ ಮಹಿಳಾ ಪ್ರಧಾನಿ, ರಾಷ್ಟ್ರಪತಿ, ಸಭಾಪತಿಯನ್ನು ನೀಡಿದೆ. ರಾಜೀವ್‌ಗಾಂಧಿ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸಲು ಅಡಿಪಾಯ ಹಾಕಿದವರು. ಕಾಂಗ್ರೆಸ್‌ನ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಿದರೆ, ಬಿಜೆಪಿ ಮನುಸ್ಮೃತಿಯ ಅಡಿಯಲ್ಲಿ ಕೆಲಸ ಮಾಡುತ್ತದೆ ಎಂದು ದೂರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಶುಭದಾಯಿನಿ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಶಾರದಾ, ಪಲ್ಲವಿ, ಮಂಗಳಮ್ಮ ಇದ್ದರು.