ಮದ್ದೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಎಂ..ಉದಯ್ ಮಾತನಾಡಿದರು. 
ಮಂಡ್ಯ

ಪದ್ಮನಾಭನಗರದಲ್ಲಿದೆ ಅಡ್ಜಸ್ಟ್‌ಮೆಂಟ್ ರಾಜಕಾರಣ: ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಚುನಾವಣೆ ಮಾಡುತ್ತೇನೆಂದ ಕಾಂಗ್ರೆಸ್ ಶಾಸಕ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಪ್ರತಿಪಕ್ಷ ನಾಯಕ ಆರ್.ಅಶೋಕ್ ಗೆ ಸಾಮಾನ್ಯ ಜ್ಞಾನ ಇಲ್ಲ
  • ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು
  • ಕಾಂಗ್ರೆಸ್ ಶಾಸಕ ಕೆ.ಎಂ.ಉದಯ್ ಟೀಕಾ ಪ್ರಹಾರ
ಮಂಡ್ಯ: ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದ ವಿಧಾನಸಭೆ ಪ್ರತಿಪಕ್ಷ ಆರ್.ಅಶೋಕ್ ಸ್ಥಳೀಯ ಶಾಸಕ ಕೆ.ಎಂ.ಉದಯ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೆ.ಎಂ.ಉದಯ್, ಶಾಸಕರ ಒತ್ತಾಯದ ಮೇರೆಗೆ ನಗರಸಭೆಗೆ ಗ್ರಾಮವನ್ನು ಸೇರಿಸಲಾಗಿದೆ ಎಂದಿದ್ದಾರೆ. ಪ್ರತಿಪಕ್ಷ ನಾಯಕರಿಗೆ ಸಾಮಾನ್ಯಜ್ಞಾನ ಇರಬೇಕು. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದೆಂದು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. 
ಮದ್ದೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೆ.ಎಂ.ಉದಯ್, ಪದ್ಮನಾಭನಗರದಲ್ಲಿ ಬೇರೆ ಬೇರೆ ರೀತಿಯ ಅಡ್ಜಸ್ಟ್‌ಮೆಂಟ್ ರಾಜಕಾರಣ ಇದೆ. ಒಬ್ಬ ನಾಯ್ಡು ಸ್ಪರ್ಧೆ ಮಾಡಿದರೆ, ಇನ್ನೊಬ್ಬ ನಾಯ್ಡುಗೆ ದುಡ್ಡು ಕೊಟ್ಟು ಸ್ಪರ್ಧೆ ಮಾಡುವಂತೆ ಮಾಡುತ್ತಾರೆ. 7 ಬಾರಿ ಗೆದ್ದಿರುವ ಆರ್.ಅಶೋಕ್ ಬಿಟಿಎಂ ಲೇಔಟ್‌ಗೆ ಹೋಗಿ ಸ್ಪರ್ಧಿಸಲಿ. ಪದ್ಮನಾಭ ನಗರಬಿಟ್ಟು ರಾಮನಗರದಲ್ಲಿ ಸ್ಪರ್ಧಿಸಲಿ. ಅಷ್ಟು ದೊಡ್ಡ ನಾಯಕರು ಏಕೆ ಕನಕಪುರದಲ್ಲಿ ಠೇವಣಿ ಕಳೆದುಕೊಂಡರು. ಯಾರು ಪದ್ಮನಾಭನಗರದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಶಕ್ತಿ ಸಿಕ್ಕರೆ ಪದ್ಮನಾಭ ನಗರದಲ್ಲಿ ಚುನಾವಣೆ ಮಾಡುತ್ತೇನೆ. ಅಲ್ಲಿ ಚುನಾವಣೆಗೆ ಸ್ಪರ್ಧಿಸಲ್ಲ. ಆದರೆ, ಅಶೋಕ್ ವಿರುದ್ಧ ಚುನಾವಣೆ ಮಾಡುತ್ತೇನೆ ಎಂದರು.
ಡಿಕೆಶಿ ಸಿಎಂ ಸ್ಥಾನ ನೀಡಬೇಕೆಂದು ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಆಸೆ ಇದೆ. ಅಂತಿಮವಾಗಿ ಹೈಕಮಾಂಡ್ ಪ್ರಕಾರ ತೀರ್ಮಾನವಾಗಲಿದೆ. ಯಾವಾಗ ಸಿಎಂ ಆಗುತ್ತಾರೆಂದು ನಾನು ಭವಿಷ್ಯ ಹೇಳಲ್ಲ. ಡಿಕೆಶಿ ಸಿಎಂ ಆಗುತ್ತಾರೆನ್ನುವ ಆತ್ಮವಿಶ್ವಾಸ ಇದೆ. ರಾಷ್ಟ್ರ ನಾಯಕರು ರಾಜ್ಯಕ್ಕೆ ಬಂದಾಗ ಸಿಎಂ, ಡಿಸಿಎಂ ಭೇಟಿ ಮಾಡುವುದು ಸಹಜ. ಸಿಎಂ ಬದಲಾವಣೆ ಚರ್ಚೆ ದೆಹಲಿಯಲ್ಲಿ ಆಗುತ್ತದೆ. ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಅಂತ ನಾವು ಯಾರು ಕೇಳುತ್ತಿಲ್ಲ. ಡಿಕೆಶಿ ಅವರಿಗೆ ಒಂದು ಅವಕಾಶ ಕೊಡಬೇಕೆನ್ನುವುದು ನಮ್ಮ ಒತ್ತಾಯ ಅಷ್ಟೆ. ಕೊಟ್ಟ ಮಾತು ಎಂದರೆ, ಆ ಚರ್ಚೆಯಲ್ಲಿ ನಾವು ಇರಲಿಲ್ಲ. ಬದಲಾವಣೆ ವದಂತಿಗೆ ಕಿವಿಕೊಡಬೇಡಿ. ಅಧಿಕೃತವಾಗಿ ಬರಲಿ ಎಂದರು.