ಮಂಡ್ಯ ನಗರಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಅವರನ್ನು ಅಭಿನಂದಿಸಲಾಯಿತು.
- ಪ್ರವಾಸಿಮಂದಿರದಲ್ಲಿ ಅಭಿನಂದನಾ ಸಮಾರಂಭ
- ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜನೆ
ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳನ್ನು ಕೇವಲ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ಆ ಸಮುದಾಯಗಳಿಗೆ ನೈಜ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿಮಂದಿರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಸಮುದಾಯದ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದುಳಿದ ಸಮುದಾಯಗಳಿಗೆ ಯಾವುದೇ ಹೊಸ ಯೋಜನೆ ಕೊಟ್ಟಿಲ್ಲ. ಬದಲಾಗಿ ಈಗಾಗಲೇ ಇದ್ದ ಸೌಲಭ್ಯಗಳನ್ನೇ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಆದರೆ, ಭಾರತೀಯ ಜನತಾ ಪಾರ್ಟಿಯು ಹಿಂದುಳಿದ ಮತ್ತು ಶೋಷಿತ ಸಮುದಾಯಗಳಿಗೆ ಕೇವಲ ಭರವಸೆ ನೀಡದೆ, ರಾಜಕೀಯ ಅಧಿಕಾರ ನೀಡುವ ಮೂಲಕ ನೈಜ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುತ್ತಿದೆ ಎಂದು ಹೇಳಿದರು.
ದಶಕಗಳಿಂದ ಕೇವಲ ವಿಧಾನಸೌಧದ ಬಾಗಿಲು ತಟ್ಟುತ್ತಿದ್ದ ಅತಿ ಹಿಂದುಳಿದ ಸಮುದಾಯಗಳಿಗೆ ಇಂದು ಒಳಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದು ಬಿಜೆಪಿ. ಶಾಂತಾರಾಮ ಸಿದ್ದಿ, ನಾರಾಯಣ್, ಛಲವಾದಿ ನಾರಾಯಣಸ್ವಾಮಿ, ಶಂಕರಪ್ಪ ಮುಂತಾದವರನ್ನು ಗುರುತಿಸಿ ಉನ್ನತ ಸ್ಥಾನಮಾನ ನೀಡಿದ ಪರಂಪರೆ ನಮ್ಮ ಪಕ್ಷಕ್ಕಿದೆ. ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಸಮಾನತೆ ಒದಗಿಸುವ ನಿಟ್ಟಿನಲ್ಲಿ ನಾವು ದಿಟ್ಟ ಹೆಜ್ಜೆ ಇಟ್ಟಿದ್ದೇವೆ ಎಂದು ಹೆಮ್ಮೆಯಿಂದ ನುಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳನ್ನು ರಾಜ್ಯಾದ್ಯಂತ ಶಕ್ತಿಶಾಲಿಯಾಗಿ ಸಂಘಟಿಸಲಾಗುತ್ತಿದೆ. 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ.ಆರ್.ನರಸಿಂಹಮೂರ್ತಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಅಶೋಕ್‌ಕುಮಾರ್, ಯಮದೂರು ಸಿದ್ದರಾಜು ಇತರರಿದ್ದರು.