ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ವಕೀಲ ಬಸವಯ್ಯ ದಂಪತಿಯನ್ನು ಗೌರವಿಸಲಾಯಿತು.  
ಮಂಡ್ಯ

ಮಂಡ್ಯದಿಂದಲೇ ನ್ಯಾಯದಾನಕ್ಕೆ ಅವಕಾಶ: ಹೈಕೋರ್ಟ್ ನ್ಯಾಯಮೂರ್ತಿ ಎಸ್.ಪಿ.ಸಂದೇಶ್ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ವಕೀಲ ಬಸವಯ್ಯ ಅವರಿಗೆ ಅಭಿನಂದನಾ ಸಮಾರಂಭ
  • ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಕೆ.ವಿ.ಶಂಕರೇಗೌಡ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಪ್ರಕರಣ ಗೆದ್ದಾಗ ಜಡ್ಜ್‌ಗಳನ್ನ ಹೊಗಳುವುದು, ಸೋತಾಗ ತೆಗಳುವುದು ಸರಿಯಲ್ಲ. ಕಾರಣ ನಾವು ನ್ಯಾಯಾಂಗದ ಒಂದು ಭಾಗವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಪಿ.ಸಂದೇಶ್ ತಿಳಿಸಿದರು.
ನಗರದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಕೆ.ವಿ.ಶಂಕರೇಗೌಡ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ವಕೀಲರ ಸಂಘ, ಪಿಇಎಸ್ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಕೀಲ ಹನುಮೇಗೌಡರು ಒಂದು ಪ್ರಕರಣದಲ್ಲಿ ನನ್ನೆದುರು ಸೋತಿದ್ದರು. ಆದರೂ ತೀರ್ಪಿನ ಸಾರಾಂಶವನ್ನು ಓದಿ, ಬಹಳ ಅದ್ಭುತವಾದ ತೀರ್ಪು ಎಂದು ಬಣ್ಣಿಸಿದ್ದರು. ಅದಕ್ಕಾಗಿ ನಾನು ಅವರಿಗೆ ಅಭಿನಂದನೆ ಹೇಳ್ಳುತ್ತೇನೆ ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು.
ನನ್ನ ತವರು ಜಿಲ್ಲೆ ಹಾಸನ. ಆದರೆ ನನ್ನ ವೃತ್ತಿ ಜೀವನದಲ್ಲಿ ನ್ಯಾಯದಾನ ಆರಂಭಿಸಲು ಮೊದಲ ಸ್ಥಳವಕಾಶ ಸಿಕ್ಕಿದ್ದು ಮಂಡ್ಯ ಜಿಲ್ಲೆ. ಹಾಗಾಗಿ ಮಂಡ್ಯ ನನಗೆ ನ್ಯಾಯದಾನದ ತವರು ಮನೆ. ಮಂಡ್ಯದ ಮಣ್ಣಿನ ಸೊಡಗು ನನ್ನನ್ನು ಗಟ್ಟಿ ಮಾಡಿದೆ. 2005ರಲ್ಲಿ ನಾನು ಮಂಗಳೂರಿಗೆ ವರ್ಗಾವಣೆಯಾಗಿ ಹೋದೆ. ಸುಮಾರು 21 ವರ್ಷದ ನಂತರ ಮಂಡ್ಯದಲ್ಲಿ ನನಗೆ ಮಾತನಾಡುವ ಅವಕಾಶ ಸಿಕ್ಕಿದೆ ಎಂದು ಸ್ಮರಿಸಿದರು.
ನಿವೃತ್ತ ನ್ಯಾಯಮೂರ್ತಿಗಳಾದ ಎ.ವಿ ಚಂದ್ರಶೇಖರ್, ಟಿ.ಜೆ.ಶಿವಶಂಕರಗೌಡ, ಅಪರ ಜಿಲ್ಲಾ ನ್ಯಾಯಾಧೀಶ ಕೆ.ವಿ.ಶಿವಪ್ರಸಾದ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಮಾಜಿ ಅಡ್ವಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್ ಸತ್ಯಾನಂದ, ಕಾರ್ಯದರ್ಶಿ ಬಿ.ಸತೀಶ್ ಇತರರಿದ್ದರು. ಇದೇ ವೇಳೆ ಹಿರಿಯ ವಕೀಲ ಬಸವಯ್ಯ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.