ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್,  
ಮಂಡ್ಯ

ಡಾ.ಕ್ಯಾತನಹಳ್ಳಿ ರಾಮಣ್ಣಗೆ ಅಭಿನಂದನೆ ನಾಳೆ

ನಾಗೇಶ ಎಸ್
ಪಾಂಡವಪುರ: ಜಾನಪದ ತಜ್ಞ, ಹೆಸರಾಂತ ಲೇಖಕ ಡಾ.ಕ್ಯಾತನಹಳ್ಳಿ ರಾಮಣ್ಣ ಅವರಿಗೆ ಏ.16ರಂದು ಬೆಳಗ್ಗೆ 10ಕ್ಕೆ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಡಾ.ಕ್ಯಾತನಹಳ್ಳಿ ರಾಮಣ್ಣ ಅಭಿನಂದನಾ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭ ಹಾಗೂ ಜಾನಪದ ತಿಳಿಜಲ ಗೌರವ ಗ್ರಂಥ ಸಮರ್ಪಣೆ, ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ತಾಲೂಕು ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್ ಹೇಳಿದರು.
ಸಮಾರಂಭದ ಸಾನ್ನಿಧ್ಯವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಮಾರಂಭ ಉದ್ಘಾಟಿಸಲಿದ್ದಾರೆ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರಿಗೆ ಗೌರವಸಮರ್ಪಣೆ ಹಾಗೂ ಡಾ.ಕ್ಯಾತನಹಳ್ಳಿ ರಾಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೊತ್ತಮ ಬಿಳಿಮಲೆ ಅವರು ಗೌರವ ಗ್ರಂಥ ಬಿಡುಗಡೆ ಮಾಡಲಿದ್ದು, ಮೈಸೂರಿನ ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಕೃತಿಗಳನ್ನು ಬಿಡುಗಡೆ ಮಾಡಲಿದ್ದು, ದಾವಣಗೆರೆಯ ಪೊಲೀಸ್ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಅವರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದಾರೆ. ಪು.ತಿ.ನ. ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಗೌರವ ನುಡಿ ನುಡಿಯಲಿದ್ದಾರೆ, ರೈತ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಎ.ಎಲ್.ಕೆಂಪೂಗೌಡ, ವೀರಶೈವ ಮುಖಂಡ ಎಸ್.ಎ.ಮಲ್ಲೇಶ್ ಭಾಗವಹಿಸಲಿದ್ದಾರೆ ಎಂದರು.
ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಮಾತನಾಡಿ, ಕ್ಯಾತನಹಳ್ಳಿ ರಾಮಣ್ಣ ಅವರ ಕುರಿತು ತರಲಾಗುತ್ತಿರುವ ಅಭಿನಂಧನ ಗ್ರಂಥವು 900 ಪುಟಗಳಿಂದ ಕೂಡಿದ್ದು, ರಾವಣ್ಣ ಅವರ ವ್ಯಕ್ತಿತ್ವ, ಜೀವನದ ಸಾಧನೆ, ವಿದ್ಯಾರ್ಥಿ ಜೀವನ, ಜಾನಪದ ಕ್ಷೇತ್ರ ಕಾರ್ಯಾಚರಣೆ ಸೇರಿದಂತೆ ರಾಮಣ್ಣ ಅವರ ಆತ್ಮಕತೆಯ 62 ಪುಟಗಳನ್ನು ಗ್ರಂಥದಲ್ಲಿ ಕಾಣಬಹುದಾಗಿದೆ. ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧ್ಯಾಯನ, ಪರಾಮರ್ಶೆಯ ಗ್ರಂಥವು ಆಗಬೇಕೆಂದು ಜಾನಪದ ಕುರಿತಂತೆ ಹೆಚ್ಚು ಮಾಹಿತಿಯನ್ನು ಗ್ರಂಥದಲ್ಲಿ ಕಾಣಬಹುದಾಗಿದ್ದು, ಒಟ್ಟು 6 ಭಾಗ ಲೇಖನಗಳನ್ನು ಹೊಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಎ.ಎಲ್.ಕೆಂಪೂಗೌಡ, ಕೆ.ಟಿ.ಗೋವಿಂದೇಗೌಡ, ವೀರಶೈವ ಮುಖಂಡ ಎಸ್.ಎ.ಮಲ್ಲೇಶ್, ಜಾನಪದ ಕೀಲಾರ ಕೃಷ್ಣೇಗೌಡ, ಮಂಜುನಾಥ್, ಅರಳಕುಪ್ಪೆ ಶ್ರೀನಿವಾಸ್ ಹಾಜರಿದ್ದರು.