ಜಿಲ್ಲೆಯ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸುರೇಶ್ ಅವರ ಮೇಲೆ ಕಪ್ಪು ಮಸಿ ಎರಚಿದ್ದ ಸಂದರ್ಭ.
ಮಳವಳ್ಳಿ: ಜಿಲ್ಲೆಯ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸುರೇಶ್ ಅವರ ಮೇಲೆ ಕಪ್ಪು ಮಸಿ ಎರಚಿದ ಘಟನೆಗೆ ತೀವ್ರ ಖಂಡನೀಯ ಎಂದು ಕುರುಬರ ಸಂಘದ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.
ಮಾ.26 ರಂದು ಸಂಘದ ಅಧ್ಯಕ್ಷರ ಮೇಲೆ ಕಿಡಿಗೇಡಿಗಳು ಕಪ್ಪು ಮಸಿ ಎರಚಿ ಅವಮಾನಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದು ಸಮಾಜದ ಗೌರವಕ್ಕೆ ಧಕ್ಕೆ ತಂದ ಘಟನೆ. ಸಂಘದ ಒಳಗಿನ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಮಾತುಕತೆಯ ಮೂಲಕ ಬಗೆಹರಿಸಬಹುದಾಗಿತ್ತು, ಆದರೆ ಇಂತಹ ಅಹಿತಕರ ನಡೆ ಸರಿಯಲ್ಲ ಎಂದು ಸೊಸೈಟಿ ಅಧ್ಯಕ್ಷ ಓಂ ಪ್ರಕಾಶ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ತಾಲೂಕು ಕಾರ್ಯದರ್ಶಿ ಶಿವಣ್ಣ ಮಾತನಾಡಿ, ಜಿಲ್ಲಾ ಅಧ್ಯಕ್ಷ ಎಂ. ಸುರೇಶ್ ಅವರು ಸಂಘದ ಬೆಳವಣಿಗೆಗಾಗಿ ಮಹತ್ವದ ಕೊಡುಗೆ ನೀಡಿದ್ದು, ಮಂಡ್ಯ ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಸಂಘಟನೆ ಬಲಪಡಿಸಲು ಶ್ರಮಿಸಿದ್ದಾರೆ. ಇಂತಹ ನಾಯಕರ ಮೇಲೆ ದಾಳಿ ನಡೆಸುವುದು ಸಮಾಜಕ್ಕೆ ಕಳಂಕ ತರುವ ಕೆಲಸವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಘಟನೆ ಸಮಾಜದ ಏಕತೆ ಮತ್ತು ಗೌರವಕ್ಕೆ ಧಕ್ಕೆ ತರುವಂತದ್ದಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಂಘದ ವಿಚಾರಗಳನ್ನು ಚರ್ಚೆಯ ಮೂಲಕವೇ ಬಗೆಹರಿಸಬೇಕು ಎಂಬ ಅಭಿಪ್ರಾಯವನ್ನು ಮುಖಂಡರು ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ನಾಗರಾಜು, ಖಜಾಂಚಿ ಸುರೇಶ್, ಸಂಘಟನೆ ಕಾರ್ಯದರ್ಶಿ ಲಿಂಗರಾಜು , ಕಾಳಿಂಗ, ಪದ್ಮಮ್ಮ, ಕಮಲಮ್ಮ ಹಾಗೂ ರಾಚೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.