ನಿಯಮ ಬಾಹಿರವಾಗಿ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿ ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಎದುರು ಷೇರುದಾರರು ಪ್ರತಿಭಟನೆ ನಡೆಸಿದರು. ಹನುಮಂತು, ಸನತ್, ಶೇಖರ್, ಚನ್ನೇಗೌಡ, ಬೋರಯ್ಯ, ಕೃಷ್ಣ, ಮೇಲೇಗೌಡ, ಶಿವಶಂಕರ್ ಇದ್ದರು.
ಮದ್ದೂರು: ನಿಯಮ ಬಾಹಿರವಾಗಿ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿ ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಎದುರು ಶನಿವಾರ ಸಂಜೆ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು.
ಸಂಘದ ಕಾರ್ಯದರ್ಶಿಯಾದ ನಂದೀಶ್ ಅವರು ಸೇವಾ ನಿವೃತ್ತಿಯಾಗುತ್ತಿದ್ದು, ತಮ್ಮ ತರಾತುರಿಯಲ್ಲಿ ಸಹಕಾರ ಸಂಘದ ಯಾವುದೇ ನಿಯಮಗಳನ್ನು ಪಾಲಿಸದೆ ಸಂಘದ ನೂತನ ಕಾರ್ಯದರ್ಶಿಯನ್ನಾಗಿ ನಿಶ್ಚಿತಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಭಟನಾನಿರತ ಷೇರುದಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷೆ ಪುತ್ರಿ ನಿಶ್ಚಿತಾ ಅವರನ್ನು ಸಂಘದ ನಿರ್ದೇಶಕರ ಸಭೆಯಲ್ಲಿ ಸರ್ವಾನುಮತ ಇಲ್ಲದಿದ್ದರೂ ಆಯ್ಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಒಟ್ಟು 11 ನಿರ್ದೇಶಕರ ಬಲ ಹೊಂದಿರುವ ಪಣ್ಣೆದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈ ವಿಚಾರಕ್ಕೆ ಕರೆಯಲಾಗಿದ್ದ ಸಭೆಯ ಸಮಯಕ್ಕೂ ಮೊದಲೇ 8 ನಿರ್ದೇಶಕರು ನಿಶ್ಚಿತಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉಳಿದ ಮೂವರು ನಿರ್ದೇಶಕರಾದ ಸುಜಾತಾ, ಸ್ವಾಮಿ ಹಾಗೂ ಜಯಲಕ್ಷ್ಮಮ್ಮ ಆರೋಪಿಸಿದರು.
ನೂತನ ಕಾರ್ಯದರ್ಶಿಯನ್ನು ಆಯ್ಕೆ ಮಾಡುವ ಮೂರು ತಿಂಗಳೇ ಮುಂಚೆಯೇ ಸಂಘದ ಮುಂದೆ ಸೂಚನಾ ಫಲಕದಲ್ಲಿ ವಿಚಾರ ಹಾಕಬೇಕಿತ್ತು ಹಾಗೂ ಪದಾಧಿಕಾರಿಗಳ ಮಕ್ಕಳನ್ನು ಹೊರತುಪಡಿಸಿ ಕಾರ್ಯದರ್ಶಿ ಆಯ್ಕೆ ಮಾಡಬೇಕು ಎಂಬ ಸಹಕಾರ ಸಂಘದ ನಿಯಮಗಳನ್ನು ಪಾಲಿಸದೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ನಂದೀಶ್ ಅವರನ್ನು ಹಾಲು ಉತ್ಪಾದಕರು ತರಾಟೆಗೆ ತೆಗೆದುಕೊಂಡರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಷೇರುದಾರ ಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತು, ಮುಖಂಡರಾದ ಸನತ್, ಶೇಖರ್, ಚನ್ನೇಗೌಡ, ಬೋರಯ್ಯ, ಕೃಷ್ಣ, ಮೇಲೇಗೌಡ, ಶಿವಶಂಕರ್, ಪುಟ್ಟಲಿಂಗಯ್ಯ, ರಾಮೇಗೌಡ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.