ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿಯ ಜೀವನದಿ ಕಾವೇರಿ ತೀರಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ನೀಡಿ ಕಾವೇರಿ ನದಿಯ ನೀರಿಗೆ ಮಲಿನ ನೀರು ಸೇರ್ಪಡೆಯಾಗುವ ಸ್ಥಳವನ್ನು ಪರಿಶೀಲಿಸಿದರು. ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ ಇತರರಿದ್ದರು. 
ಮಂಡ್ಯ

ಕೈಗಾರಿಕೆಗಳಿಗೆ ಮಾನದಂಡ ಪಾಲನೆ ಕಡ್ಡಾಯ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ
ಶ್ರೀರಂಗಪಟ್ಟಣ : ಪಟ್ಟಣದಲ್ಲಿ ಜೀವನದಿ ಕಾವೇರಿ ನೀರಿಗೆ ಮಲಿನ ನೀರು ಸೇರ್ಪಡೆಯಾಗುತ್ತಿರುವುದನ್ನು ತಡೆಗಟ್ಟುವ ಸಂಬಂಧ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿ ಡಾ.ಕುಮಾರ ಪರಿಶೀಲಿಸಿದರು.
ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿಯ ಕಾವೇರಿ ನದಿ ತೀರಕ್ಕೆ ಬುಧವಾರ ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವ್ಯವಸ್ಥೆ ಉಂಟಾಗಿರುವ ಸ್ಥಳ ಹಾಗೂ ಮಲಿನ ನೀರು ಸೇರ್ಪಡೆ ತಡೆಗೆ ಕೈಗೊಂಡಿರುವ ನೀಲಿನಕ್ಷೆ ಕುರಿತು ಮಾಹಿತಿ ಪಡೆದು ಮಾತನಾಡಿದರು.
ಕಾವೇರಿ ನದಿಗೆ ತ್ಯಾಜ್ಯ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳು ಎಲ್ಲಿಂದ ಮತ್ತು ಯಾವ ಪ್ರಮಾಣದಲ್ಲಿ ಹರಿಯುತ್ತಿವೆ ಎಂಬುದನ್ನು ಪತ್ತೆ ಹಚ್ಚಬೇಕು. ಕೊಳಚೆ ನೀರು ಹರಿಯುವ ಪ್ರದೇಶಗಳಲ್ಲಿ ತಡೆಗೋಡೆ ಅಥವಾ ಮಾರ್ಗಾಂತರ ನಾಲೆ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸಬೇಕು. ಲಭ್ಯವಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸಾಮರ್ಥ್ಯ ಮತ್ತು ಅವುಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಬೇಕು ಎಂದರು.
ಇನ್ನು ನದಿಯ ಆಸುಪಾಸಿನಲ್ಲಿರುವ ಸ್ಥಳೀಯ ಸಂಸ್ಥೆಗಳ ಕಸ ಮತ್ತು ತ್ಯಾಜ್ಯ ವಿಲೇವಾರಿಯ ಕ್ರಮಗಳನ್ನು ಪರಿಶೀಲಿಸಬೇಕು. ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಘಟಕ ನಿರ್ಮಿಸಲು ಸಾಧ್ಯವಾಗದ ಕಾರಣ ಅವುಗಳ ತ್ಯಾಜ್ಯವನ್ನು ಸಂಸ್ಕರಿಸಲು ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳ ಕಡ್ಡಾಯ ಬಳಕೆ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಬೇಕು. ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಪ್ರತಾಪ್ ಇತರರಿದ್ದರು.