ಕಿಕ್ಕೇರಿಯಲ್ಲಿನ ನಾಡಕಚೇರಿಯಲ್ಲಿ ಆದಾಯ ಪ್ರಮಾಣ ಪತ್ರ, ವಾಸಸ್ಥಳ ಮತ್ತಿತರ ಪ್ರಮಾಣ ಪತ್ರ ಪಡೆಯಲು ದಿನಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿ ಜನಸಾಮಾನ್ಯರಲ್ಲಿ ಆತಂಕ ಮೂಡಿದೆ.
ತಾಲೂಕಿನಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾದ ಕಿಕ್ಕೇರಿಯಲ್ಲಿನ ನಾಡಕಚೇರಿಯಲ್ಲಿ ಆದಾಯ ಪ್ರಮಾಣ ಪತ್ರ, ವಾಸಸ್ಥಳ ಮತ್ತಿತರ ಪ್ರಮಾಣ ಪತ್ರ ಪಡೆಯಲು ದಿನಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿ ಜನಸಾಮಾನ್ಯರಲ್ಲಿ ಆತಂಕ ಮೂಡಿದೆ.
ಕಳೆದ ಒಂದೆರಡು ತಿಂಗಳಿನಿಂದ ಸರ್ವರ್ ಸಮಸ್ಯೆ ಕಾಡುತ್ತಿದ್ದು ದೂರದ ಊರುಗಳಿಂದ ಬರುವ ರೈತರು, ನಾಗರಿಕರಿಗೆ ದೊಡ್ಡ ಸಮಸ್ಯೆಯಾಗಿದೆ. ಇತ್ತೀಚೆಗೆ ಎಸ್‌ಐಆರ್ ವಿಶೇಷ ಮತದಾನ ಪ್ರಕ್ರಿಯೆ ಆರಂಭವಾದ ಮೇಲೆ ಮತ್ತಷ್ಟು ಸಮಸ್ಯೆ ದೊಡ್ಡದಾಗಿದೆ. ದೂರದ ಗ್ರಾಮಗಳಿಂದ ಜಾತಿ, ಆದಾಯ ಪ್ರಮಾಣ ಪತ್ರ, ವಂಶವೃಕ್ಷ, ಭೂ ಹಿಡುವಳಿ, ಇಸಿ ಮತ್ತಿತರ ದಾಖಲೆ ಪ್ರಮಾಣ ಪತ್ರ ಪಡೆಯಲು ಮುಂಜಾನೆ 6ಗಂಟೆಗೆ ನಾಡಕಚೇರಿ ಬಳಿ ಜಮಾಯಿಸುತ್ತಿದ್ದಾರೆ. ತಿಂಡಿ, ಊಟ ಬಿಟ್ಟು ಕಚೇರಿ ಬಳಿ ಕಾಯುತ್ತ ಹೈರಾಣವಾಗುವಂತಾಗಿದೆ.
ಹಲವು ದಾಖಲೆಗಳನ್ನು ಪ್ರಮುಖ ದಾಖಲೆ ಪಡೆಯಲು ದಿನಗಟ್ಟಲೆ ಕಾದು ಕುಳಿತರೂ ಸರ್ವರ್ ಸಮಸ್ಯೆಯಿಂದ ಸಪ್ಪೆ ಮೊರೆಯಿಂದ ಮನೆಗೆ ತೆರಳುತ್ತಾರೆ. ಪುನಃ ಬೆಳಗ್ಗೆ ಕೇಂದ್ರಕ್ಕೆ ಆಗಮಿಸುತ್ತಾರೆ. ವಯೋವೃದ್ಧರು, ವಿದ್ಯಾರ್ಥಿಗಳು, ರೈತರು, ಮಹಿಳೆಯರು ಊಟ ತಿಂಡಿ ಬಿಟ್ಟು ದಿನಗಟ್ಟಲೆ ನಾಡಕಚೇರಿ ಮುಂದೆ ನಿಂತುಕೊಳ್ಳಬೇಕಾಗಿದೆ. ಕೆಲವರಿಗೆ ಪ್ರಮಾಣ ಪತ್ರ ಸಿಕ್ಕರೆ, ಮತ್ತೆ ಕೆಲವರಿಗೆ ಸಿಗದಂತಾಗಿದೆ. ಸರ್ವರ್ ಸಮಸ್ಯೆಗೆ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ.
ಹೋಬಳಿಯ ಮಾದಾಪುರ, ಗಾಣದಹಳ್ಳಿ, ಗೊಂದಿಹಳ್ಳಿಯಂತಹ 12 ಕಿ.ಮೀ.ಗೂ ಹೆಚ್ಚಿನ ಅಂತರ ಇರುವ ಹಳ್ಳಿಯ ಜನತೆ ಮುಂಜಾನೆಯ ತಮ್ಮ ಕೃಷಿ ಕೆಲಸ ಬಿಟ್ಟು ನಾಡಕಚೇರಿ ಬಳಿ ಸರತಿಯಲ್ಲಿ ನಿಲ್ಲುವುದು, ಹಲವು ಹಳ್ಳಿಗರಿಗೆ ಮುಂಜಾನೆ ವಾಹನ ಸೌಲಭ್ಯವಿಲ್ಲದೆ ಕಾಲ್ನಡಿಗೆಯಲ್ಲಿ ಬರುವುದು ನರಕಯಾತನೆಯಾಗಿದೆ.
ಬೆಳೆ ದೃಢೀಕರಣ, ಆದಾಯ ಪ್ರಮಾಣ ಪತ್ರ ಮತ್ತಿತರ ದಾಖಲೆ ಪಡೆಯಲು ಎರಡರಿಂದ ಮೂರು ಬಾರಿ ಒಟಿಪಿ ತಿಳಿಸಬೇಕಾಗಿದ್ದು, ಒಂದು ಬಾರಿ ಒಟಿಪಿ ಹೇಳಿದರೆ ಮತ್ತೊಂದು ಬಾರಿ ಹೇಳುವ ಮುನ್ನವೇ ಸರ್ವರ್ ಕೈಕೊಡುವಂತಾಗಿದೆ. ತಾವು ಏನು ಮಾಡಲು ಸಾಧ್ಯ ಎಂದು ನಾಡಕಚೇರಿಯ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್ ಬೇಸರದಿಂದ ತಿಳಿಸುತ್ತಾರೆ.
ಮೂರ‌್ನಾಲ್ಕು ತಿಂಗಳಿಂದ ಸಂಧ್ಯಾಸುರಕ್ಷಾ ಮಾಸಾಶನ ವಯೋವೃದ್ಧರಿಗೆ ನಿಲುಗಡೆಯಾಗಿದ್ದು, ಇವುಗಳನ್ನು ಪಡೆಯಲು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ. ಹೀಗಾಗಿ ವಯೋವೃದ್ಧರ ಸಮಸ್ಯೆ ಕೇಳುವವರು ಯಾರೂ ಎನ್ನುವಂತಾಗಿದೆ. ನಾಡಕಚೇರಿಯಲ್ಲಿ ಒಂದೇ ಕೌಂಟರ್ ಇದ್ದು, ಹೆಚ್ಚುವರಿ ಕೌಂಟರ್ ಆರಂಭವಾದರೆ ಜನರ ಸಮಸ್ಯೆ ತುಸು ಕಡಿಮೆ ಆಗಬಹುದಾಗಿದೆ.