ನಾಗಮಂಗಲ ತಾಲೂಕು ಬಿ.ಜಿ.ನಗರದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಅನುವಾದಾತ್ಮಕ ಸಂಶೋಧನೆಗಾಗಿ ಆರೋಗ್ಯ ವಿಜ್ಞಾನಗಳಲ್ಲಿ ಅಂತರಶಿಸ್ತೀಯ ವಿಧಾನಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಎನ್.ಚಲುವರಾಯಸ್ವಾಮಿ ಇದ್ದರು. 
ಮಂಡ್ಯ

ವಿಜ್ಞಾನ, ಆಧ್ಯಾತ್ಮ ನಡುವೆ ನಿಕಟ ಸಂಪರ್ಕ

ಲಲಾಟಾಕ್ಷ ಎಸ್
ನಾಗಮಂಗಲ: ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಜಗತ್ತು ಬೇರೆ ವಿಷಯಗಳಂತೆ ಕಂಡರೂ ಜ್ಞಾನದ ದೃಷ್ಟಿಯಿಂದ ಅವಲೋಕಿಸಿದಾಗ ಎರಡೂ ವ್ಯವಸ್ಥಿತವಾಗಿ ಸಂಪರ್ಕ ಹೊಂದಿರುವುದು ಅರ್ಥವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಸಭಾಂಗಣದಲ್ಲಿ ಸೋಮವಾರ ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್ ಫಾರ್ ಮಾಲಿಕ್ಯೂಲರ್ ಮೆಡಿಸಿನ್, ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಅನುವಾದಾತ್ಮಕ ಸಂಶೋಧನೆಗಾಗಿ ಆರೋಗ್ಯ ವಿಜ್ಞಾನಗಳಲ್ಲಿ ಅಂತರ್‌ಶಿಸ್ತೀಯ ವಿಧಾನಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಾನ್ನಿಧ್ಯವಹಿಸಿ ಮಾತನಾಡಿದರು.
ಪರಮ ಪ್ರಜ್ಞೆಯು ಪ್ರಕೃತಿಯ ಮೂಲಕ ತನ್ನನ್ನು ತಾನು ಅಭಿವ್ಯಕ್ತಗೊಳಿಸಲು ಬಯಸಿದಾಗ, ಮೊದಲು ಅದು ಗಣಿತದ ಸಮೀಕರಣಗಳ ಮೂಲಕ ವ್ಯಕ್ತವಾಗುತ್ತದೆ. ಅದ್ಭುತವಾದ ಭೌತಿಕ ನಿಯಮಗಳು, ಆಕರ್ಷಕ ಜೈವಿಕ ಸೃಷ್ಟಿ, ಇವೆಲ್ಲವೂ ಅದರ ಸೊಗಸಾದ ಸಮರೂಪತೆಯನ್ನು ಬಿಂಬಿಸುತ್ತವೆ. ಇನ್ನೂ ಆಳವಾಗಿ ಗಮನಿಸಿದಾಗ ಈ ಜಗತ್ತು ಕೇವಲ ಜಡವಸ್ತುವಿಗಿಂತ ಹೆಚ್ಚಾಗಿ ಒಂದು ಶುದ್ಧ ಪ್ರಜ್ಞೆಯಂತೆ ಕಾಣುತ್ತದೆ ಎಂದರು.
ಪ್ರಸ್ತುತ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಹುಶಿಸ್ತೀಯ ವಿಧಾನಗಳು ಸಂಶೋಧನಾ ಚಟುವಟಿಕೆಗಳಾಗುತ್ತವೆ. ಈ ಅನುವಾದಿತ ಸಂಶೋಧನೆಯನ್ನು ಮಾಡಿದಾಗ ಅದು ಕಾರ್ಯರೂಪಕ್ಕೆ ಬಂದಾಗ ಅದು ಮತ್ತೊಮ್ಮೆ ಅಗತ್ಯವಿರುವ ಜನರನ್ನು ತಲುಪುತ್ತದೆ. ಈ ವಿಶ್ವವಿದ್ಯಾಲಯದಲ್ಲೇ ನಾವು ವೈದ್ಯಕೀಯ, ಅಣ್ವಿಕ ಜೀವಶಾಸತ್ರ, ಇಂಜಿನಿಯರಿಂಗ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಬಿಗ್ ಡೇಟಾ ಹೀಗೆ ಹತ್ತು ಹಲವು ಅನೇಕ ವಿಭಾಗಗಳಿವೆ. ಇವೆಲ್ಲವೂ ಪ್ರತ್ಯೇಕವಾಗಿರುವಂತೆ ಕಾಣುತ್ತವೆ. ಆದರೆ, ಇವುಗಳನ್ನು ಒಂದಕ್ಕೊಂದು ಹೇಗೆ ಜೋಡಿಸಬೇಕು ಎಂದು ತಿಳಿದಿದ್ದರೆ ಈ ವಿಭಿನ್ನ ವಿಭಾಗಗಳು ಪ್ರಸ್ತುತ ಇರುವ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಬಲ್ಲವು. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ವಿಭಿನ್ನ ಪರಿಹಾರಗಳೊಂದಿಗೆ ನೀವು ಹೇಗೆ ಮುಂದೆ ಬರುತ್ತೀರಿ ಮತ್ತು ಜನರನ್ನು ತಲುಪುತ್ತೀರಿ ಎಂಬುದನ್ನು ತಿಳಿಯಲು ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಮಾತನಾಡಿ, ಸಮ್ಮೇಳನದಲ್ಲಿ ಚರ್ಚೆಗಳು ಹೊಸ ವಿಚಾರಗಳನ್ನು ಪ್ರೇರೇಪಿಸುತ್ತವೆ. ಅಂತಾರಾಷ್ಟ್ರೀಯ ಸಹಯೋಗ, ಸಂಶೋಧನೆಯನ್ನು ಪ್ರೋತ್ಸಾಹಿಸುತ್ತದೆ. ಆರೋಗ್ಯ ವಿಜ್ಞಾನದ ಉನ್ನತಿಗೆ ಮಹತ್ವದ ಕೊಡುಗೆ ನೀಡಲಿದೆ. ಈ ಸಮ್ಮೇಳನದ ಉಪಯುಕ್ತತೆ ದೇಶಕ್ಕೆ ಕೊಡುಗೆಯಾಗಲಿ ಎಂದರು.
ಆದಿಚುಂಚನಗಿರಿ ಮಠವು ಧರ್ಮಪರಾಯಣತೆ ಮತ್ತು ಸಕಾರಾತ್ಮಕ ಶಕ್ತಿಯ ಭೂಮಿಯಾಗಿದೆ. ಇದು ದೇಶದ ಪ್ರಸಿದ್ಧ ಮಠಗಳಲ್ಲಿ ಒಂದಾಗಿದ್ದು, 1,800ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಸಾಮಾಜಿಕ, ಧಾರ್ಮಿಕ ಪ್ರಗತಿಯಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವ ಪೂರ್ಣವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಮೂಲಕ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಸಾಮಾಜಿಕ ಸಮಾನತೆ, ಸಶಕ್ತೀಕರಣ, ಉದ್ಯಮಶೀಲತೆ ಮತ್ತು ಜ್ಞಾನೋದಯಕ್ಕಾಗಿ ಎಲ್ಲರಿಗೂ ಅಮೂಲ್ಯವಾದ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು.
ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರು ಸುಮಾರು ಐದು ದಶಕಗಳ ಕಾಲ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉಲ್ಲೇಖನೀಯ ಕೊಡುಗೆ ನೀಡಿದ್ದಾರೆ. ಅವರ ದರ್ಶನ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ಜೋಡಿಸುವ ಅವರ ದರ್ಶನವು ಇಂದಿಗೂ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದೆ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಕ್ರಿಯಾಶೀಲ ಮತ್ತು ದೂರದರ್ಶಿ ನಾಯಕತ್ವವನ್ನು ಶ್ಲಾಘನೆ ಮಾಡುತ್ತೇನೆ. ಅವರ ಮಾರ್ಗದರ್ಶನದಲ್ಲಿ ಮಠವು ಇನ್ನಷ್ಟು ಎತ್ತರಕ್ಕೆ ತಲುಪುತ್ತಿದೆ ಎಂದರು.
ಎಐ ಸಮಾಜದ ಒಳಿತಿಗಾಗಿ ಬಳಕೆಯಾಗಲಿ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಮಾತನಾಡಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ ಗುಣಮಟ್ಟದ ವಿದ್ಯಾಸಂಸ್ಥೆ. ಕೈಗೆಟುಕುವ ದರದಲ್ಲಿ ಗ್ರಾಮೀಣ ಬಡ ಜನರಿಗೆ ವೈದ್ಯಕೀಯ ಸೇವೆ ಸೇರಿದಂತೆ ಶಿಕ್ಷಣ ಕಲ್ಪಿಸುತ್ತಿದೆ. ಸರ್ಕಾರ ಮಾಡದ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಇಂದಿನ ಸಮ್ಮೇಳನವನ್ನು ನೋಡಿದಾಗ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ದೂರದೃಷ್ಟಿ ಕಾಣಿಸುತ್ತಿದೆ ಎಂದರು.
ಪ್ರಸ್ತುತ ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ವಿಭಿನ್ನ ಪರಿಹಾರಗಳ ಅವಶ್ಯಕತೆ ಇದೆ. ಭಾರತೀಯ ಪದ್ಧತಿಯು ಬಹಳ ಹಿಂದೆಯೇ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಟ್ಟಿಗೆ ವಿಕಸನಗೊಂಡಿತ್ತು. ಆಧುನಿಕ ವ್ಯವಸ್ಥೆಯು ನಮ್ಮ ಸನಾತನ ಮತ್ತು ಪ್ರಾಚೀನ ಜ್ಞಾನ ಪದ್ಧತಿಯನ್ನು ಸಂಯೋಜಿಸಿದರೆ ಮಾತ್ರ ನಾವು ಒಂದು ಸಮಗ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆಯುರ್ವೇದ ಅತ್ಯುತ್ತಮವಾದದ್ದು, ಅದನ್ನು ಅಲೋಪತಿಯೊಂದಿಗೆ ಸಂಯೋಜಿಸಿದರೆ ಅದು ಒಂದು ಉತ್ತಮ ಪರಿಹಾರ ನೀಡುತ್ತದೆ. ಕೃತಕ ಬುದ್ಧಿಮತ್ತೆ ಬಗ್ಗೆ ನಾವು ಏನು ಯೋಚಿಸುತ್ತಿದ್ದೇವೆಯೋ, ಅದು ಇಂದಿನ ಯುವ ಪೀಳಿಗೆಯ ಜ್ಞಾನ ಪದ್ಧತಿಯಾಗಿ ಕಂಡುಬರುತ್ತಿದೆ. ಕೃತಕ ಬುದ್ಧಿಮತ್ತೆ ಹಾನಿಯಾಗದಂತೆ ಸಮಾಜದ ಉಪಯುಕ್ತತೆಗೆ ಬಳಸಬೇಕಿದೆ ಎಂದರು.
ತಿರುಪತಿಯ ಎಸ್‌ಇಆರ್‌ಬಿ ನ್ಯಾಷನಲ್ ಸೈನ್ಸ್ ಚೇರ್ ಮತ್ತು ಐಐಎಸ್‌ಇಆರ್‌ನ ಮಾಜಿ ನಿರ್ದೇಶಕ ಪ್ರೊ.ಕೆ.ಎನ್.ಗಣೇಶ, ಶಾಸಕ ಎನ್.ಚಲುವರಾಯಸ್ವಾಮಿ, ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಜಪಾನಿನ ಹೊಕ್ಕೈಡೋ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಅಡ್ವಾನ್ಸ್ಡ್ ಲೈಫ್ ಸೈನ್ಸ್‌ನ ಹಿರಿಯ ಪ್ರೊಫೆಸರ್ ಶಿನ್ ಇಚಿರೋ ನಿಶಿಮುರಾ ಸಮ್ಮೇಳನ ಕುರಿತು ಮಾತನಾಡಿದರು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಎಸ್.ಶ್ರೀಧರ, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಉಪಸ್ಥಿತರಿದ್ದರು.