ಮದ್ದೂರು ನಗರದ ಪೇಟೆ ಬೀದಿಯಲ್ಲಿ ಅಧಿಕಾರಿಗಳು ಹಾಗೂ ಪೋಲಿಸ್ ಬಂದೋಬಸ್ತ್‌ನಲ್ಲಿ ಫುಟ್‌ಪಾತ್ ಒತ್ತುವರಿಯನ್ನು ತೆರವು ಮಾಡಲಾಯಿತು. 
ಮಂಡ್ಯ

ಮದ್ದೂರಿನ ಪೇಟೆ ಬೀದಿಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು

ಪ್ರಮುಖ ಮುಖ್ಯಾಂಶಗಳು

  • ಪೇಟೆ ಬೀದಿಯ ಫುಟ್‌ಪಾತ್ ಒತ್ತುವರಿ ತೆರವು
  • ಪೋಲಿಸ್ ಬಂದೋಬಸ್ತ್‌
ಮದ್ದೂರು: ನಗರದ ಪೇಟೆ ಬೀದಿಯ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಗುರುವಾರ ಪೋಲಿಸ್ ಬಂದೋಬಸ್ತ್‌ನಲ್ಲಿ ನಡೆಯಿತು.
ಪೇಟೆ ಬೀದಿ ರಸ್ತೆಯ ಕೊಲ್ಲಿ ವೃತ್ತದಿಂದ ಪ್ರವಾಸಿ ಮಂದಿರದ ವೃತ್ತದವರೆಗಿನ ತೆರವು ಕಾರ್ಯಾಚರಣೆಯಲ್ಲಿ ನಗರಸಭೆ, ಲೋಕೋಪಯೋಗಿ ಹಾಗೂ ನಗರದ ಪೋಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಅಂಗಡಿ-ಮುಂಗಟ್ಟುಗಳ ಸರಕು, ತಗಡಿನ ಶೀಟ್, ನಾಮಫಲಕ ಸೇರಿದಂತೆ ಇತರ ವಸ್ತುಗಳನ್ನು ತೆರವುಗೊಳಿಸಲಾಯಿತು.
ನಗರಸಭೆ ಪೌರಾಯುಕ್ತೆ ರಾಧಿಕಾ ಮಾತನಾಡಿ, ನಗರದ ಪೇಟೆ ಬೀದಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಪಾಕಿರ್ಂಗ್ ಮಾಡಲಾಗುತ್ತಿತ್ತು. ಬಹುತೇಕ ಅಂಗಡಿಯವರು ತಮ್ಮ ಅಂಗಡಿಗಳ ಸರಕನ್ನು ಫುಟ್‌ಪಾತ್‌ನಲ್ಲಿ ಇಡುತ್ತಿದ್ದುದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರ ಮಾಡುವುದು ಕಷ್ಟವಾಗಿತ್ತು. ಈ ಬಗ್ಗೆ ನಾಗರಿಕರು ನಗರಸಭೆಗೆ ಹಲವು ಬಾರಿ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆ ಮಾಡಲಾಯಿತು ಎಂದರು.
ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ, ಅಂಗಡಿ ಸರಕುಗಳನ್ನು ಇಡುವಂತಿಲ್ಲ. ವಾಹನಗಳು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅಂಗಡಿ ಮಾಲೀಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾತಿನ ಚಕಮಕಿ: ಬೆಳ್ಳಂ ಬೆಳಗ್ಗೆ ನಗರಸಭಾ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಆತಂಕಗೊಂಡ ವ್ಯಾಪಾರಿಗಳು, ನಮಗೆ ಯಾವುದೇ ರೀತಿಯ ನೋಟಿಸ್ ನೀಡದೆ ಏಕಾಏಕಿ ಬಂದು ಫುಟ್ಪಾತ್ ತೆರವು ಮಾಡುತ್ತಿರುವುದು ಸರಿಯಲ್ಲ. ನಮ್ಮ ಗಮನಕ್ಕೆ ತಂದು ತೆರವು ಕಾರ್ಯಾಚರಣೆ ಮಾಡಬೇಕಿತ್ತು ಎಂದರು. ಈ ವೇಳೆ ಅಧಿಕಾರಿಗಳು ಹಾಗೂ ಕಟ್ಟಡ ಮಾಲೀಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕೊಲ್ಲಿ ವೃತ್ತದಿಂದ ಟಿಬಿ ವೃತ್ತದ ಸುಮಾರು ಎರಡೂವರೆ ಕಿ.ಮೀ.ದೂರವರೆಗಿನ ಫುಟ್ಪಾತ್ ಮೇಲ್ಲಿದ್ದ ಅಂಗಡಿಗಳು ಹಾಗೂ ನಾಮಫಲಕಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.