ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಶಾಸಕ ಎಚ್.ಟಿ.ಮಂಜು ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ನಂದಿನಿ, ಎಎಸ್ಪಿ ತಿಮ್ಮಯ್ಯ ಇತರರು ಇದ್ದರು. 
ಮಂಡ್ಯ

ಎಪಿಎಂಸಿ ಜಾಗ ಒತ್ತುವರಿ ತೆರವುಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಟಿ.ಮಂಜು ಸೂಚನೆ
  • ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ
ಕೆ.ಆರ್.ಪೇಟೆ: ಪಟ್ಟಣದ ಎಪಿಎಂಸಿ ಜಾಗ ಒತ್ತುವರಿ ತೆರವುಗೊಳಿಸಲು ಎಂದು ಶಾಸಕ ಎಚ್.ಟಿ.ಮಂಜು ಎಪಿಎಂಸಿ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದ ಎಪಿಎಂಸಿಗೆ ಹಿಂದೆ ರೈತರು ಹತ್ತಾರು ಎಕರೆ ಭೂಮಿ ದಾನವಾಗಿ ನೀಡಿದ್ದಾರೆ. ಆದರೆ ಪ್ರಭಾವಿಗಳು ಸದ್ಯ ಕಾಂಪೌಂಡ್ ಒಡೆದು ಎಪಿಎಂಸಿ ಜಾಗ ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಎಪಿಎಂಸಿ ಅಧಿಕಾರಿಗಳು ಸರ್ಕಾರಿ ಜಾಗ ಉಳಿಸಲು ಮುಂದಾಗಬೇಕು ಎಂದರು.
ಹಿರಿಕಳಲೆ ಗ್ರಾಮದಲ್ಲಿ 50*100 ಅಳತೆಯ ಜಾಗವನ್ನು ಅಕ್ರಮವಾಗಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಾರ್ಯದರ್ಶಿ ಅಕ್ರಮವಾಗಿ ಇ-ಸ್ವತ್ತು ಮಾಡಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್‌ಗೆ ನಿರ್ದೇಶನ ನೀಡಿದರು.
ಸಿಂಧುಘಟ್ಟ ಗ್ರಾಮದಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಇದ್ದು, ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ಗ್ರಾಮವಾಗಿದೆ. ಹಾಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಪಿಡಿಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅತಿ ಶೀಘ್ರವೇ ಸರ್ಕಾರಿ ಜಾಗ ಗುರುತಿಸಬೇಕು ಎಂದು ತಿಳಿಸಿದರು.
ಹಳೇ ಮುದ್ಲಾಪುರ ಗ್ರಾಮದಲ್ಲಿ ಬೀಳುಭೂಮಿಯಲ್ಲಿ ರಸ್ತೆ ನಿರ್ಮಿಸುವ ಸಂಬಂಧ ಕೆಲವರ ಪ್ರತಿಷ್ಠೆಗಾಗಿ ಜಗಳ ನಡೆಯುತ್ತಿದೆ. ಹಾಗಾಗಿ ಸದರಿ ಭೂಮಿಯ ದಾಖಲೆ ಪರಿಶೀಲನೆ ಮಾಡಿ ಬೀಳುಭೂಮಿ ಎಂದು ಆರ್‌ಟಿಸಿಯಲ್ಲಿ ದಾಖಲಿಸಿ ರಸ್ತೆ ನಿರ್ಮಿಸಲು ಅವಕಾಶ ನೀಡಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಶೀಳನೆರೆ ಹೋಬಳಿಯ ಮಾದಿಗರಹೊಸಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಹತ್ತಾರು ಎಕರೆ ವಿಸ್ತೀರ್ಣದ ಕೆರೆ ಇದೆ ಆದರೆ ಪಹಣಿಯಲ್ಲಿ ದಾಖಲಾಗಿಲ್ಲ. ಇದನ್ನು ಬಲಾಢ್ಯರು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಹಾಗಾಗಿ ತಕ್ಷಣವೇ ಪಹಣಿಯಲ್ಲಿ ಕೆರೆ ಎಂದು ನಮೂದಿಸಿ, ಸರ್ವೇ ನಡೆಸಿ ಹದ್ದುಬಸ್ತು ಗುರುತಿಸಿ ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ಕೆರೆ ಉಳಿಸಬೇಕು ಎಂದು ಶಾಸಕರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಈ ಹಿಂದೆ ಶಾಸಕ ಎಚ್.ಟಿ.ಮಂಜು ಅವರ ನೇತೃತ್ವದಲ್ಲಿ ನಡೆಸಿದ ಜನಸಂಪರ್ಕ ಸಭೆಯಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಆಗಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜನಸಂಪರ್ಕ ಸಭೆಯ ಅರ್ಜಿಗಳಿಗೆ ಸೂಕ್ತ ಸ್ಪಂದನೆ ನೀಡಬೇಕು. ನಿರ್ಲಕ್ಷೃ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಂಗೇಗೌಡನಕೊಪ್ಪಲು ಗ್ರಾಮ ನಕ್ಷೆಯಂತೆ ರಸ್ತೆಯಿದ್ದು, ಸದರಿ ರಸ್ತೆಯನ್ನು ಬದಲಾಯಿಸಿ ಹಿಡುವಳಿ ಜಮೀನಿನಲ್ಲಿ ರಸ್ತೆ ಬಿಟ್ಟಿರುತ್ತಾರೆ. ಇದರಿಂದ ರೈತರ ನಡುವೆ ಗಲಾಟೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಮೂಲ ನಕ್ಷೆ ಪ್ರಕಾರ ರಸ್ತೆ ಬಿಡಿಸಲು ಹಾಗೂ ಪಥ ಬದಲಾವಣೆ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ಪ್ರಸಿದ್ಧ ಪುಣ್ಯಕ್ಷೇತ್ರ ಸಾಸಲು ಗ್ರಾಮದ ಶ್ರೀ ಶಂಭುಲಿಂಗೇಶ್ವರ ಹಾಗೂ ಶ್ರೀ ಸೋಮೇಶ್ವರ ದೇವಾಲಯ ಜಾಗ ಹಾಗೂ ದೇವರ ಜಮೀನಿನ ಸಂಬಂಧ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ತಹಸೀಲ್ದಾರ್ ದೇವಾಲಯಕ್ಕೆ ಸೇರಿದ ಜಮೀನನ್ನು ಸಂರಕ್ಷಣೆ ಮಾಡಲು ತುರ್ತು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಲು ಸರ್ಕಾರದ ಅಧಿಸೂಚನೆ ಹೊರಡಿಸಿದಾಗ ಸಾಸಲು ಕ್ಷೇತ್ರಕ್ಕೂ ಸಮಿತಿ ರಚಿಸಲು ಅವಕಾಶ ಇದೆ. ಅದೇ ರೀತಿ ದೇವಾಲಯಕ್ಕೆ ಪ್ರತ್ಯೇಕ ಕಾರ್ಯ ನಿರ್ವಾಹಕ ಅಧಿಕಾರಿ ನೇಮಕ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಆದೇಶ ಬಂದ ಕೂಡಲೇ ದೇವಾಲಯ ಸಮಿತಿಗೆ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ತಾಲೂಕಿನಲ್ಲಿ ತತ್ಕಾಲ್ ಪೋಡಿ, ಅಳತೆ ಕಾರ್ಯ ಎಲ್ಲವೂ ನಿಧಾನವಾಗಿ ನಡೆಯುತ್ತಿದೆ. ಈ ಬಗ್ಗೆ ಎಡಿಎಲ್‌ಆರ್ ಹಾಗೂ ಸರ್ವೇ ಅಧಿಕಾರಿಗಳು ತುರ್ತು ಕ್ರಮ ವಹಿಸಿ ಸರ್ವೇ ಕಾರ್ಯ ವೇಗ ಹೆಚ್ಚಿಸಬೇಕು ಎಂದು ಶಾಸಕರು ತಾಕೀತು ಮಾಡಿದರು.
ಪೊಲೀಸ್ ಅಧಿಕಾರಿಗಳು ಪಟ್ಟಣದಲ್ಲಿ ವಾಹನಗಳ ದಾಖಲೆ ಪರಿಶೀಲನೆ ನಡೆಸಿದರೆ, ನಮ್ಮ ಅಭ್ಯಂತರವಿಲ್ಲ. ಆದರೆ ಹಳ್ಳಿಗಳಲ್ಲಿ ರಾತ್ರಿ ವೇಳೆ ಜಮೀನಿನ ಕಡೆ ಹೋಗುವ ರೈತರ ಬೈಕ್‌ಗಳನ್ನು ತಡೆದು ದಾಖಲೆ ಕೇಳುವುದು ಸರಿಯಲ್ಲ. ರೈತರು ಜಮೀನಿಗೆ ಹೋಗುತ್ತಾರೆ. ಜಾನುವಾರುಗಳಿಗೆ ಮೇವು ತರಲು ಹೋಗುತ್ತಾರೆ ಅಲ್ಲಿಗೂ ಬೈಕ್ ದಾಖಲೆ ತೆಗೆದುಕೊಂಡು ಹೋಗಬೇಕೆ? ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ಜಮೀನು ಕಡೆಗೆ ಹೋಗುವ ರೈತರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸ್ ಇಲಾಖೆಗೆ ಸಲಹೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ನಂದಿನಿ, ಎಎಸ್ಪಿ ತಿಮ್ಮಯ್ಯ ಪಾಂಡವಪುರ ಎಸಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಕೆ.ಸುಷ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.