ಮಳವಳ್ಳಿ : ಸಿವಿಲ್ ನ್ಯಾಯಾಧೀಶರಾಗಿದ್ದ ತಾಲೂಕಿನ ಅಂಚೆದೊಡ್ಡಿ ಗ್ರಾಮದ ಕಾಂತಮ್ಮ(43) ಅವರು ಅನಾರೋಗ್ಯದಿಂದ ಬುಧವಾರ ತಡರಾತ್ರಿ ನಿಧನರಾಗಿದ್ದಾರೆ.
ಗ್ರಾಮದ ನಾಗೇಗೌಡರ ಅವರ ಪುತ್ರಿ ಕಾಂತಮ್ಮ ಅವರು 8 ವರ್ಷಗಳಿಂದ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ತುಮಕೂರು ಜಿಲ್ಲೆ ಮಧುಗಿರಿ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶರಾಗಿದ್ದರು. ಬುಧವಾರ ರಾತ್ರಿ ಜ್ವರ ಕಾಣಿಸಿಕೊಂಡಿದ್ದು ಮನೆಯಲ್ಲೇ ರೋಗ ನಿರೋಧಕ ಮಾತ್ರೆ ಸೇವಿಸಿ ವಿಶ್ರಾಂತಿಗೆ ಜಾರಿದ್ದ ಇವರು, ಬೆಳಗ್ಗೆ ಎಷ್ಟು ಹೊತ್ತಾದರೂ ಏಳದೇ ಇರುವುದನ್ನು ಗಮನಿಸಿದ ಕುಟುಂಬದವರು ಕೋಣೆಯೊಳಗೆ ಹೋಗಿ ನೋಡಲಾಗಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೈದ್ಯಕೀಯ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಶವವನ್ನು ಒಪ್ಪಿಸಲಾಗಿದೆ.
ಗುರುವಾರ ಸ್ವಗ್ರಾಮ ಅಂಚೆ ದೊಡ್ಡಿಯ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು. ಜಿಲ್ಲೆ ಮತ್ತು ತಾಲೂಕು ನ್ಯಾಯಾಲಯಗಳ ನ್ಯಾಯಾಧೀಶರು ಮೃತರ ಅಂತಿಮ ದರ್ಶನ ಪಡೆದರು. ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸಲ್ಲಿಸಲಾಯಿತು.