ಮಂಡ್ಯ ತಾಲೂಕು ಕ್ಯಾತುಂಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. 
ಮಂಡ್ಯ

ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲಿ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಕ್ಯಾಂತುಗೆರೆ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ
  • ಕಾಲಭೈರವೇಶ್ವರ ದೇವಾಲಯ ಲೋಕಾರ್ಪಣೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ
ಮಂಡ್ಯ: ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ. ಅದಕ್ಕಿಂತ ಮುಖ್ಯವಾಗಿ ಉತ್ತಮ ಸಂಸ್ಕಾರ ಹೇಳಿಕೊಡಿ. ಈ ಮೂಲಕ ಸಂಸ್ಕಾರಯುತವಾಗಿ ಬದುಕುವುದನ್ನು ತಿಳಿಸಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಕೊತ್ತತ್ತಿ ಹೋಬಳಿ ಕ್ಯಾತುಂಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ನೂತನ ಕಾಲಭೈರವೇಶ್ವರ ದೇವಾಲಯ ಲೋಕಾರ್ಪಣೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ವಿದ್ಯಾವಂತರು ಹೆಚ್ಚಾಗುತ್ತಿರುವ ದಿನಮಾನದಲ್ಲಿ ಹೇಳುವುದನ್ನು ಕೇಳುವ ಪರಿಸ್ಥಿತಿ ಯಾರಲ್ಲೂ ಇಲ್ಲ. ಆದರೂ ಹೇಳುವುದನ್ನು ಎಲ್ಲವನ್ನು ಅರ್ಥವಾಗಿ ವೈಜ್ಞಾನಿಕವಾಗಿ ಹೇಳಬೇಕು ಎಂದು ತಿಳಿಸಿದರು.
ಸತ್ಯ, ಧರ್ಮ ಮಾರ್ಗದಲ್ಲಿ ನಡೆದರೆ ಮನುಷ್ಯನಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಆಧ್ಯಾತ್ಮಿಕತೆ ಮರೆತರೆ ಬೇರಿಲ್ಲದ ಮರದಂತೆ ಜೀವನ ಆಗುತ್ತದೆ. ಈ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯವಿದೆ. ಊರಿನ ದೈವ ಭೈರವೇಶ್ವರ ಸ್ವಾಮಿಗೆ ದೇವಾಲಯ ಕಟ್ಟಿದ್ದೀರಿ. ದೇವರು ಕೂಡ ನಮಗಾಗಿ ಇರುತ್ತಾನೆಯೇ ಹೊರತು ದೇವರೇ ಬಂದು ಭಕ್ತರಲ್ಲಿ ದೇವಾಲಯ ನಿರ್ಮಿಸಿಕೊಡಿ ಎಂದು ಕೇಳುವುದಿಲ್ಲ. ನಮ್ಮ ಪ್ರತಿ ಕಾರ್ಯದಲ್ಲೂ ಭಗವಂತ ಇರುತ್ತಾನೆ ಎಂದು ಉಸಿರಾಟದಂತೆ ಆತನ ಸ್ಮರಣೆ ಮಾಡುತ್ತಿದ್ದರೆ ಆತನ ಅನುಭೂತಿ ನಮಗಾಗುತ್ತದೆ ಎಂದು ತಿಳಿಸಿದರು.
ದೇವರಿಗೆ ಗಂಡು-ಹೆಣ್ಣು ಭೇದ ಇಲ್ಲ. ಎಲ್ಲವನ್ನು ನೋಡುವ ಕಣ್ಣು ತನ್ನನ್ನು ತಾನು ನೋಡಿ ಕೊಳ್ಳುವುದಿಲ್ಲ. ಭೈರವೇಶ್ವರ ಮತ್ತು ಆಂಜನೇಯ ಶಕ್ತಿಯುತ ದೇವರು. ಸ್ವಾಮಿ ನಮ್ಮ ಸುತ್ತಮುತ್ತ ಇರುವುದರಿಂದ ನಾವು ಎರಡು ದೇವರಿಗೆ ಹುಷಾರಾಗಿ ನಡೆದುಕೊಳ್ಳಬೇಕು. ಭಕ್ತಿಯಿಂದ ಪೂಜೆ ಮಾಡೋಣ. ಕಾಯಿಲೆ ಬಂದಾಗ ವೈದ್ಯರ ಹತ್ತಿರ ಹೋಗುತ್ತೇವೋ, ಅದೇ ರೀತಿ ದೇವರ ಹತ್ತಿರ ಹೋದಾಗ ಮನಸ್ಸಿನ ಕಾಯಿಲೆ ಏನು ಎಂದು ದೇವರಿಗೆ ಗೊತ್ತಾಗುತ್ತದೆ. ಆಗ ದೇವರು ಅದಕ್ಕೆ ಪೂರಕವಾಗಿರುವ ರೀತಿಯಲ್ಲಿ ನಮಗೆ ಏನು ಔಷಧ ಬೇಕು ಅದನ್ನು ಕೊಟ್ಟು ಕಳಿಸುತ್ತಾರೆ. ನಾವು ದೇವರ ಹತ್ತಿರ ಹೋದಾಗ ಏನು ಕೇಳಬೇಕು ಎಂದರೆ ಜಗತ್ತಿಗೆ ನಮ್ಮನ್ನು ಕರೆದುಕೊಂಡು ಬಂದಿದ್ದೀಯಾ, ನನಗೆ ಏನು ಬೇಕು ಎಂದು ನಿನಗೆ ಗೊತ್ತಿದೆ. ಅದನ್ನಷ್ಟೇ ಕೊಟ್ಟು ನಮ್ಮನ್ನು ಕಾಪಾಡು ಎಂದು ಭಕ್ತಿಯಿಂದ ದೇವರನ್ನು ಕೇಳಿ ಎಂದು ತಿಳಿಸಿದರು.
ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ, ಗ್ರಾಮದ ಮುಖಂಡರಾದ ಕೆ.ಟಿ.ಪುಟ್ಟಸ್ವಾಮಿ, ಕೆ.ಎಂ.ಬಸವರಾಜು, ಕೃಷ್ಣ, ಲೋಕೇಶ್, ಕೆ.ಕಿರಣ್, ಡಾ.ಕೆ.ಎಂ.ಶಿವಕುಮಾರ್, ಶಂಭೂನಹಳ್ಳಿ ಕೃಷ್ಣ, ಕಾಳೇಗೌಡ, ಸಿದ್ದೇಗೌಡ ಇತರರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಕಾಲಭೈರವೇಶ್ವರ ದೇವಾಲಯದ ಉದ್ಘಾಟನೆ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.