ಸಿ.ಎಸ್.ಪುಟ್ಟರಾಜು, ಮಾಜಿ ಸಚಿವರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ
ಪಾಂಡವಪುರ: ಕನಗನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದ 14 ಎಕರೆ ಜಾಗವನ್ನು ಆಂಧ್ರ ಮೂಲದ ವ್ಯಕ್ತಿಗೆ 30 ವರ್ಷಕ್ಕೆ ಗುತ್ತಿಗೆ ನೀಡಿ ಕೇವಲ 4.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದರ ಜತೆಗೆ ಉತ್ಪಾದನೆಯಾಗುವ ವಿದ್ಯುತ್‌ನನ್ನು ಚಿನಕುರಳಿ ಸಬ್‌ಸ್ಟೇಷನ್‌ಗೆ ತರಲು ಪ್ರತ್ಯೇಕ ಲೈನ್ ಅಳವಡಿಸಲು ಹಲವು ರೈತರ ಜಮೀನು ಮತ್ತು ತೋಟದ ಬೆಳೆ ನಾಶವಾಗಿ ರೈತರಿಗೆ ಅನಾನೂಕೂಲವಾಗಲಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆರೋಪಿಸಿದರು.
ಚಿನಕುರಳಿಯಲ್ಲಿ ಸೋಮವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ರೈತರಿಗೆ ಅನನುಕೂಲ ಉಂಟುಮಾಡಿ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ದುಡ್ಡು ಮಾಡಿಕೊಡಲು ಮುಂದಾಗಿದ್ದಾರೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಚಿನಕುರಳಿ ಪವರ್ ಸ್ಟೇಷನ್‌ಗೆ ಪ್ರತ್ಯೇಕ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಅಳವಡಿಕೆ ಕಾಮಗಾರಿಯನ್ನು ಮಾಡಿದ್ದೇನೆ. ಇದರ ಮೂಲಕ ಈ ಭಾಗದ ರೈತರಿಗೆ ಹಗಲು ವೇಳೆಯಲ್ಲಿ ಉತ್ತಮ ವಿದ್ಯುತ್ ನೀಡಲು ಶಾಸಕರು ಶ್ರಮಿಸಬೇಕು. ರೈತಾಪಿ ವರ್ಗಕ್ಕೆ ಮಾರಕವಾಗಿರುವ ಸೋಲಾರ್ ಪವರ್ ಪ್ಲಾಂಟ್ ಯೋಜನೆ ಅನುಷ್ಠಾನ ಮಾಡಬಾರದು ಎಂದು ಒತ್ತಾಯಿಸಿದರು.
ನಾನು ಶಾಸಕನಾಗಿ ಆಯ್ಕೆಯಾಗುವವರೆಗೂ ಕ್ಷೇತ್ರದಲ್ಲಿ ಇದ್ದದ್ದು ಕೇವಲ ಒಂದೇ ಒಂದು ವಿದ್ಯುತ್ ಸಬ್ ಸ್ಟೇಷನ್. ಶಾಸಕನಾದ ಬಳಿಕ ಹೋಬಳಿಗೆ ಮೂರು ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವ ಕೆಲಸ ಮಾಡಿದ್ದೇನೆ. ನಮಗೆ ಸೋಲಾರ್ ಪ್ಲಾಂಟ್‌ನ ಅವಶ್ಯಕತೆ ಇಲ್ಲ. ಶಾಸಕರು ಬೇಕಾದರೆ ಬೇರೆಡೆಗೆ ವರ್ಗಾಯಿಸಲಿ. ನನ್ನ ಅವಧಿಯಲ್ಲಿ ಕ್ಯಾತನಹಳ್ಳಿಗೆ ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಿಸಿದ್ದೇನೆ. ಆದರೆ ಇಲ್ಲಿಯವರೆಗೂ ಅದಕ್ಕೆ ಜಾಗ ಮಂಜೂರು ಮಾಡಿಸಿಕೊಡಲು ಆಗಿಲ್ಲ. ಮೊದಲು ಕ್ಯಾತನಹಳ್ಳಿ ವಿದ್ಯುತ್ ಸಬ್ ಸ್ಟೇಷನ್‌ಗೆ ಸ್ಥಳ ಮಂಜೂರು ಮಾಡಿಸಿಕೊಡುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ತಾಲೂಕಿನವರಾದ ಐಎಎಸ್ ಅಧಿಕಾರಿಯಾಗಿದ್ದ ಎಸ್.ಆರ್.ಉಮಾಶಂಕರ್ ಅವರು ಗೃಹ ಇಲಾಖೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಚಿನಕುರಳಿ ಗ್ರಾಮದ ಉಪ ಠಾಣೆಯನ್ನು ಮೇಲ್ದರ್ಜೆಗೇರಿಸಿ ಪೊಲೀಸ್ ಠಾಣೆ ಮಂಜೂರು ಮಾಡಿಸಿದ್ದರು. ಆದರೆ, ಈಗಿನ ಶಾಸಕರು ಅದನ್ನು ರದ್ದುಪಡಿಸಿ ಕ್ಯಾತನಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಿದ್ದಾರೆ. ಶಾಸಕರು ಮನಸ್ಸು ಮಾಡಿದ್ದರೆ ಈಗಿನ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ಯಾತನಹಳ್ಳಿ ಗ್ರಾಮಕ್ಕೂ ಸಬ್ ಸ್ಟೇಷನ್ ಮಂಜೂರು ಮಾಡಿಸಿಕೊಳ್ಳಬಹುದಾಗಿತ್ತು. ಅದನ್ನು ಬಿಟ್ಟು ಚಿನಕುರಳಿಗೆ ಮಂಜೂರಾಗಿದ್ದ ಠಾಣೆಯನ್ನು ಸ್ಥಳಾಂತರ ಮಾಡಿಸಿ ತಮ್ಮೂರಿಗೆ ತೆಗೆದುಕೊಂಡು ಹೋದರು. ಇದೀಗ ಸ್ಥಳೀಯರ ವಿರೋಧದ ನಡುವೆಯೂ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ ಎಂದು ದೂರಿದರು.