ಮಂಡ್ಯ ತಾಲೂಕು ಹೆಮ್ಮಿಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಎಎಸ್ಪಿ ಎಸ್.ಇ.ಗಂಗಾಧರಸ್ವಾಮಿ ಹಾಗೂ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
- ಹೆಮ್ಮಿಗೆ ಗ್ರಾಮದಲ್ಲಿ ಮಕ್ಕಳ ಹಬ್ಬ
- ಅಂಜನಾದ್ರಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ ಮನವಿ ಮಾಡಿದರು.
ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಅಂಜನಾದ್ರಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಲು ಪಾಲಕರು ಹಿಂಜರಿಯುತ್ತಿದ್ದಾರೆ. ಆದರೆ ಈ ಶಾಲೆಯನ್ನು ನೋಡಿದರೆ ಖಾಸಗಿ ಶಾಲೆಗಿಂತಲೂ ಯಾವುದರಲ್ಲಿಯೂ ಕಡಿಮೆ ಇಲ್ಲ. ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬಹಳ ಸುಂದರವಾಗಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಸರ್ಕಾರದ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಕನ್ನಡ ಶಾಲೆಗಳ ಅಭಿವೃದ್ಧಿ ಮಾಡಬೇಕು. ಇದು ಎಲ್ಲರ ಕರ್ತವ್ಯ ಆಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಆಡಳಿತ ಭಾಷೆ ಕನ್ನಡ ಅಭಿವೃದ್ಧಿಯಾಗಬೇಕಾದರೆ ಸರ್ಕಾರಿ ಶಾಲೆ ಮತ್ತು ಕಚೇರಿಯಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು. ಸರ್ಕಾರಿ ಶಾಲೆ ಉಳಿಯಬೇಕು. ಇಂತಹ ಮಹತ್ವವಾದ ನರ್ಸರಿ ಆಂಗ್ಲ ಮಾಧ್ಯಮ ಶಾಲೆಯನ್ನು ಅಂಜನಾದ್ರಿ ಸೇವಾ ಟ್ರಸ್ಟ್ ಮೂಲಕ ಸರ್ಕಾರಿ ಶಾಲೆಯಲ್ಲಿ ಪ್ರಾರಂಭಿಸಿರುವುದು ಬಹಳ ಹೆಮ್ಮೆಯ ವಿಷಯ. ಇದಕ್ಕಾಗಿ ಗ್ರಾಮಸ್ಥರು ಮತ್ತು ಟ್ರಸ್ಟಿನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, 200ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮುಚ್ಚುವ ಹಂತದಲ್ಲಿವೆ. ಅತಿ ಹೆಚ್ಚು ಕನ್ನಡ ಮಾತಾಡುವ ಜಿಲ್ಲೆಯ ಪರಿಸ್ಥಿತಿ ಈ ರೀತಿಯಾದರೆ ಗಡಿಭಾಗದ ಜಿಲ್ಲೆಗಳ ಗತಿ ಏನು?. ಸರ್ಕಾರಿ ಶಾಲೆ ಹಾಗೂ ಕನ್ನಡ ಭಾಷೆ ರಾಜ್ಯದಲ್ಲಿ ಅಗ್ರಸ್ಥಾನ ಪಡೆಯಬೇಕು. ಆ ಸ್ಥಾನಕ್ಕೆ ಯಾವ ತೊಂದರೆಯೂ ಆಗದೆ ಇರುವ ರೀತಿ ಏಳು ಕೋಟಿ ಜನರು ಕನ್ನಡ ಭಾಷೆಯನ್ನ ಬೆಳೆಸಬೇಕು. ತಮ್ಮ ಮನೆಗಳಲ್ಲಿ ಕನ್ನಡ ಭಾಷೆ ಮಾತನಾಡಬೇಕು. ಕನ್ನಡ ಭಾಷೆಗೆ ತನ್ನದೇ ಆದ ಗತವೈಭವ ಇದೆ. ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಹೋರಾಟ ಹೀಗೆ ವಿವಿಧ ಕ್ಷೇತ್ರಗಳಿಗೆ ಘಟಾನುಘಟಿ ನಾಯಕರು ಶಕ್ತಿ ತುಂಬಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಸಿದ್ದಪ್ಪ, ರೈತ ಸಂಘದ ಚಂದ್ರಶೇಖರ್, ಪುಟ್ಟೇಗೌಡ, ಮೆಡಿಕಲ್ ರವಿ, ಟ್ರಸ್ಟ್ ಅಧ್ಯಕ್ಷ ವಿನೋದ್, ಉಪಾಧ್ಯಕ್ಷ ಪ್ರದೀಪ್, ಪ್ರತಾಪ್, ಮಧುಸೂದನ್, ಕೃಷ್ಣಪ್ಪ, ಮಹೇಂದ್ರ, ಕಿರಣ್, ಗ್ರಾಪಂ ಮಾಜಿ ಅಧ್ಯಕ್ಷ ಪ್ರಶಾಂತ್, ಪ್ರಸಾದ್ ಇತರರಿದ್ದರು.