ಕಿಕ್ಕೇರಿ ರಾಯಲ್ ಸ್ಕೂಲ್‌ನಲ್ಲಿ ಶನಿವಾರ ಸಂಭ್ರಮದಿಂದ ಮಕ್ಕಳ ಸಂತೆ ನಡೆಸಿದರು.
ಕಿಕ್ಕೇರಿ: ಮಕ್ಕಳಿಗೆ ಪಠ್ಯದ ಜತೆಗೆ ಸಹಪಠ್ಯವಾಗಿ ವ್ಯಾವಹಾರಿಕ ಜ್ಞಾನಕ್ಕಾಗಿ ಮಕ್ಕಳಿಗೆ ವಿವಿಧ ಚಟುವಟಿಕೆಯನ್ನು ಹಮ್ಮಿಕೊಳ್ಳುವುದು ಬಲು ಅವಶ್ಯ ಎಂದು ರಾಯಲ್ ಸ್ಕೂಲ್ ಮಹೇಶ್ ಬಿ.ಗೌಡ ತಿಳಿಸಿದರು.
ಇಲ್ಲಿನ ರಾಯಲ್ ಸ್ಕೂಲ್ ವತಿಯಿಂದ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಅಂಕದಷ್ಟೆ ಬದುಕುವ ಪಾಠ ಮುಖ್ಯವಾಗಿದೆ. ದೈನಂದಿನ ಬದುಕಿಗೆ ಬೇಕಿರುವ ಸಾಮಾನು, ಸರಂಜಾಮು ಖರೀದಿಸುವ ಜ್ಞಾನ ಬೇಕಿದೆ. ಮಕ್ಕಳ ಸಂತೆ ಮಕ್ಕಳಿಗೆ, ಪಾಲಕರಿಗೆ ಖುಷಿ ಕೊಡುವ ಜತೆಗೆ ಹಣಕಾಸಿನ ವ್ಯವಹಾರವನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕಲಿಸಲಿದೆ ಎಂದರು.
ಇಂತಹ ಮೇಳಗಳಿಂದ ಮಕ್ಕಳಿಗೆ ಹಣದ ಬೆಲೆ, ಶ್ರಮದ ಬದುಕಿನ ಅರಿವು, ಗಣಿತದ ಲೆಕ್ಕಾಚಾರ, ನಿತ್ಯ ಜೀವನದಲ್ಲಿ ಗಣಿತ ಬಳಕೆಯಿಂದ ಸುಲಭವಾಗಿ ಕೂಡುವುದು, ಕಳೆಯುವುದು, ಭಾಗಾಕಾರ ಎಲ್ಲವನ್ನೂ ಬಲು ಬೇಗನೆ ಕಲಿಸಲು ಸಹಾಯವಾಗಲಿದೆ. ದೊಡ್ಡವರಾದಾಗ ಸ್ವತಂತ್ರವಾಗಿ ಬದುಕಲು ಸಾಧ್ಯವಾಗಲಿದೆ ಎಂದು ಹೇಳಿದರು.
ಪಾಲಕರು ಖುಷಿಯಿಂದ ಮಕ್ಕಳು ತಂದು ಅಂಗಡಿಗಳಂತೆ ಜೋಡಿಸಿಟ್ಟಿದ್ದ ವಸ್ತುಗಳನ್ನು ಚೌಕಾಸಿ ಮಾಡುತ್ತ, ರೇಗಿಸುತ್ತ ಖುಷಿಯಿಂದ ಖರೀದಿಸಿದರು. ಮಕ್ಕಳು ಜೋರಾಗಿ ಕೂಗುತ್ತ ಒಂದು ತೆಗೆದುಕೊಂಡರೆ ಮತ್ತೊಂದು ಫ್ರೀ ಎಂದು ಗ್ರಾಹಕರನ್ನು ಕರೆಯುತ್ತಿದ್ದರು. ಚುರುಮುರಿ, ಸೌತೆಕಾಯಿ, ಬಜ್ಜಿ ಮೆಣಸಿನಕಾಯಿ, ಕಲ್ಲಂಗಡಿ, ತರಕಾರಿ, ಹಸಿರು ಸೊಪ್ಪು, ಪಪ್ಪಾಯಿ, ಬಾಳೆಹಣ್ಣು, ಚುರುಮುರಿ, ಗೋಬಿ ಮಂಚೂರಿ, ಜ್ಯೂಸ್, ಬರ್ಗರ್, ಬಜ್ಜಿ, ಬೋಂಡಾದಂತಹ ವಿವಿಧ ವಸ್ತುಗಳನ್ನು ತಂದು ಖುಷಿಯಿಂದ ವ್ಯಾಪಾರ ಮಾಡಿದರು. ಪಾಲಕರು ಮಕ್ಕಳಿಗೆ ಸಾಥ್‌ನೀಡಿ ವ್ಯಾಪಾರ ವಹಿವಾಟಿಗೆ ಸಹಕರಿಸಿದರು.
ವ್ಯವಸ್ಥಾಪಕ ದಿನೇಶ್, ಮುಖ್ಯಶಿಕ್ಷಕಿ ಅಂಬಿಕಾ, ಮೇಘನಾ, ಅರ್ಪಿತಾ, ಗೀತಾ, ದಿವ್ಯಾ, ಕಾಂತಮಣಿ ಮತ್ತಿತರರಿದ್ದರು.