ಕಾರಿಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಗಮನ ಸೆಳೆಯಿತು.
- ಕಾರಿಗಾನಹಳ್ಳಿ ಗ್ರಾಮ
- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಿಕ್ಕೇರಿ: ಮಕ್ಕಳಿಗೆ ಪಠ್ಯದೊಂದಿಗೆ ವ್ಯಾವಹಾರಿಕ ಜ್ಞಾನವೂ ಮುಖ್ಯವಾಗಿದ್ದು, ಇಂತಹ ಸನ್ನಿವೇಶವನ್ನು ಹೋಬಳಿಯ ಕಾರಿಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳು, ಶಿಕ್ಷಕರು ಹಾಗೂ ಪಾಲಕರ ಸಹಕಾರದೊಂದಿಗೆ ಸೃಷ್ಟಿ ಮಾಡಿದರು.
ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳಸಂತೆಯಲ್ಲಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಕಾರಿಗಾನಹಳ್ಳಿ ಪುಟ್ಟೇಗೌಡ, ಮಕ್ಕಳು ಕೇವಲ ಅಂಕ ಗಳಿಸಿದರೆ ಸಾಲದು. ಬದಲಾಗಿ ಬಾಲ್ಯದಿಂದಲೇ ಬದುಕಿನ ಕಲೆಗಾಗಿ ಕನಿಷ್ಠ ವ್ಯವಹಾರ ಜ್ಞಾನವನ್ನಾದರೂ ಕಲಿಯಬೇಕು. ಮಕ್ಕಳ ಸಂತೆ ಮೂಲಕ ಹಣಕಾಸಿನ ವ್ಯವಹಾರವನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕಲಿಸಲು ಶಿಕ್ಷಕರು ಮುಂದಾಗಿರುವುದು ಸಂತಸ ತಂದಿದೆ ಎಂದರು.
ಮಕ್ಕಳು ತಂದು ಅಂಗಡಿಗಳಂತೆ ಜೋಡಿಸಿಟ್ಟಿದ್ದ ವಸ್ತುಗಳನ್ನು ಪಾಲಕರು ಖುಷಿಯಿಂದ ಖರೀದಿಸಿದರು. ಮಕ್ಕಳು ಜೋರಾಗಿ ಕೂಗುತ್ತ ಒಂದು ತೆಗೆದುಕೊಂಡರೆ ಮತ್ತೊಂದು ಪ್ರೀ ಎಂದು ಗ್ರಾಹಕರನ್ನು ಕರೆಯುತ್ತಿದ್ದರು. ಚುರುಮುರಿ, ಸೌತೆಕಾಯಿ, ಕಲ್ಲಂಗಡಿ, ತರಕಾರಿ, ಜ್ಯೂಸ್, ಬಜ್ಜಿ, ಬೋಂಡಾದಂತಹ ವಿವಿಧ ವಸ್ತುಗಳನ್ನು ತಂದು ಖುಷಿಯಿಂದ ವ್ಯಾಪಾರ ಮಾಡಿದರು. ನಿಖರವಾಗಿ ತಕ್ಕಡಿಯಿಂದ ತೂಗಿ ವಸ್ತುಗಳನ್ನು ಬಟ್ಟೆಬ್ಯಾಗ್‌ನಲ್ಲಿ ತುಂಬಿ ಕೊಟ್ಟು ಪರಿಸರ ಪ್ರೇಮ ಮೆರೆದರು.
ಶಿಕ್ಷಕರಾದ ಜಿ.ಕೆ. ಸ್ವಾಮಿ, ಜಯಕುಮಾರ್, ಸಿ. ದೇವರಾಜು ಇತರರಿದ್ದರು.