ನಾಗಮಂಗಲ ತಾಲೂಕಿನ ಶ್ರೀಆದಿಚುಂಚನಗಿರಿ ಮಠದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶವನ್ನು ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.ಶ್ರೀಪ್ರಸನ್ನನಾಥ ಸ್ವಾಮೀಜಿ, ಡಾ.ಎ.ಟಿ.ಶಿವರಾಮ್, ಶಾಸಕ ಲಕ್ಷ್ಮೀನಾರಾಯಣ ಇದ್ದರು.
- ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ
ನಾಗಮಂಗಲ: ತಾಯಿಯಾದವಳು ತನ್ನೆಲ್ಲಾ ಒತ್ತಡಗಳ ನಡುವೆಯೂ ತನ್ನ ತಾಯ್ತನದ ಕೆಲಸಗಳನ್ನು ನಿಲ್ಲಿಸದೆ, ತನ್ನ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಸಮಾಜಕ್ಕೆ ಒಂದು ಕೊಡುಗೆಯನ್ನಾಗಿಸುವ ಹಿಂದೆ ಬೆಟ್ಟದಷ್ಟು ಕಾಣಿಕೆಯಿರಲಿದ್ದು ಅದನ್ನು ಮಕ್ಕಳು ಸಂಶಯಿಸಬಾರದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಶ್ರೀಆದಿಚುಂಚನಗಿರಿ ಮಠದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಬಿಜಿಎಸ್ ಸಭಾ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶದ ಸಾನಿಧ್ಯವಹಿಸಿ ಮಾತನಾಡಿದರು.
ತಾಯಿಯಾದವಳು ಅನೇಕ ಕೆಲಸಗಳ ನಡುವೆ ತಾಯ್ತನದ ಕೆಲಸ ನಿಲ್ಲಿಸಲು ಆಗುವುದಿಲ್ಲ. ತಾಯಂದಿರ ಒತ್ತಡ ಇಡೀ ಮನೆಗೆ ಆವರಿಸುವಂತದ್ದಾಗಿರುತ್ತದೆ. ತಾಯಂದಿರ ಪ್ರಜ್ಞೆ ಬಹಳ ಮುಖ್ಯ. ಒಕ್ಕಲಿಗ ಸಮಾಜದ ಮನೆಗಳಲ್ಲಿ ಹುಟ್ಟುವ ಮಕ್ಕಳು ಜಗತ್ತಿಗೆ ಕಾಣಿಕೆಯಾಗುವಂತಿರಲಿ. ಇಂದಿನ ಕಾಲಘಟ್ಟದಲ್ಲಿ ಮಹಿಳೆಯರಿಗೆ ಸವಾಲುಗಳು ಹೆಚ್ಚು. ಅವುಗಳನ್ನು ಎದುರಿಸುವ ಪ್ರಜ್ಞೆ ಮತ್ತು ತಾಳ್ಮೆ ತಮ್ಮಲ್ಲಿರಬೇಕಿದೆ. ಸ್ತ್ರೀಯರು ಕೋಪದ ಕೈಗೆ ಬುದ್ಧಿ ಕೊಡಬೇಡಿ. ಬದುಕನ್ನು ಹಾಳು ಮಾಡುವ ಕೋಪದ ಮಾತುಗಳಿಗೆ ತಮಗೆ ತಾವೇ ಕಡಿವಾಣ ಹಾಕಿಕೊಂಡಾಗ ಮಾತ್ರ ಸಂಸಾರ ಸರಿದಾರಿಯಲ್ಲಿ ಸಾಗಲು ಸಾಧ್ಯವಾಗತ್ತದೆ. ಒಂದು ಸಮುದಾಯದ ಹೆಣ್ಣು ಮಕ್ಕಳು ಏನಾದರೂ ಮಾಡಿದರೆ ಅದು ಇಡೀ ಸಮುದಾಯಕ್ಕೆ ಆಗುವ ತೊಂದರೆ. ಆದ್ದರಿಂದ ಸಂಘಟನೆಗಳು, ಮುಖ್ಯವಾಹಿನಿಯಲ್ಲಿರುವವರು ಎಚ್ಚರಿಕೆಯಿಂದ ಸಮಾಜವನ್ನು ಕಟ್ಟುವ ಕೆಲಸವಾಗಲಿ. ಸೇವೆಗಾಗಿ ಸಂಘಟನೆಯಾಗಿರಬೇಕು. ಸಂಘಟನೆಗಳು ಅಹಂ ಅನ್ನು ಮುಂದಿಟ್ಟುಕೊಳ್ಳಬಾರದು. ಚುಂಚಾದ್ರಿ ಮಹಿಳಾ ಸಮಾವೇಶವಿರುವುದು ತಮ್ಮಲ್ಲಿರುವ ಮಾನವ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳಲು ಆಗಿದೆ. ನಮ್ಮನ್ನು ಆಡಿಕೊಳ್ಳವವರೆದುರು ಹೆಚ್ಚು ಪ್ರಜ್ಞಾವಂತರಾಗಬೇಕು. ನಮ್ಮ ಸಮಾಜದ ಸಂಘಟನೆಗಳು ಅಹಂ ಪ್ರದರ್ಶನಕ್ಕಾಗಿ ಸಂಘಟನೆ ಆಗುವುದು ಬೇಡ ಎಂದರು.
ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾಮಾನಸ ಮಾತನಾಡಿ, ಆದಿಚುಂಚನಗಿರಿ ಮಠ ಕಾರ್ಯಕ್ರಮದ ಮೂಲಕ ಪ್ರತಿವರ್ಷ ಒಕ್ಕಲಿಗ ನಾರಿ ಶಕ್ತಿ ಒಂದೆಡೆ ಸೇರಿ ಸಮಾಜ ಕಟ್ಟುವ ಕೆಲಸವಾಗುತ್ತಿದೆ. ನಾರಿಯರಿಗೆ ಶಕ್ತಿ ತುಂಬುವ ಕೆಲಸವನ್ನು ಶ್ರೀಮಠ ಮಾಡುತ್ತಿರುವುದು ಶ್ಲಾಘನೀಯ. ಒಕ್ಕಲಿಗ ಜನಾಂಗಕ್ಕೆ ಏನಾದರೂ ಗೌರವ ಅಭಿಮಾನ ಎಂಬುದು ಬಂದಿದ್ದೆ ಆದರೆ ಅದು ಬಾಲಗಂಗಾಧರನಾಥ ಸ್ವಾಮೀಜಿಯವರ ಕೆಲಸಗಳಿಂದಾಗಿದೆ. ಶ್ರೀಗಳ ಸಮಾಜ ಕಟ್ಟುವ ಕೆಲಸ ಇಂದು ನಮ್ಮನ್ನು ಕಾಪಾಡುತ್ತಿದೆ. ಮನುಜ ಮತ ವಿಶ್ವ ಪಥ ಎಂಬ ನಾಣ್ಣುಡಿಯಂತೆ ಶ್ರೀಮಠ ನಡೆದುಕೊಳ್ಳುತ್ತಿದೆ. ಒಕ್ಕಲಿಗ ಮಠದಲ್ಲಿ ಸಂಸ್ಕೃತ ಕಲಿಸುವ ಪರಿಪಾಠವು ಶ್ರೀಮಠದ ಅನನ್ಯ ಕೊಡುಗೆಯಾಗಿದೆ ಎಂದರು.
ಭೈರವಿ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಭೈರವಿ ಪ್ರಶಸ್ತಿ ನೀಡಿ ಗೌರವಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಡಾ.ಸತ್ಯಪ್ರಭಾ, ಕೃಷಿ ಕ್ಷೇತ್ರದಲ್ಲಿ ರತ್ನಮ್ಮ, ಕ್ರೀಡಾ ಕ್ಷೇತ್ರದಲ್ಲಿ ಬಿಂದುರಾಣಿ, ಜಾನಪದ ಕ್ಷೇತ್ರದಲ್ಲಿ ದಿವ್ಯಆಲೂರು, ಹಾಗೂ ಸಂಘಟನೆ ಕ್ಷೇತ್ರದಲ್ಲಿ ಶುಭ ಅವರಿಗೆ ಭೈರವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರಭುದೇವ ಮಾತನಾಡಿದರು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮ್, ತುರುವೆಕೆರೆ ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮೀನಾರಾಯಣ, ವೈದ್ಯೆ ಡಾ.ಪುಣ್ಯವತಿ ನಾಗರಾಜ್, ಸಂಘದ ವಿವಿಧ ಜಿಲ್ಲೆಗಳ ಅಧ್ಯಕ್ಷೆಯರು ನಿರ್ದೇಶಕಿಯರು ಉಪಸ್ಥಿತರಿದ್ದರು.